ನವದೆಹಲಿ: ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ಮತ್ತು ನಾಲ್ವರು ಭಾರತೀಯ ವಾಯುಪಡೆಯ ಸಿಬ್ಬಂದಿ ವಿರುದ್ಧ ₹ 3,600 ಕೋಟಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಗಿ ನೇಮಕಗೊಳ್ಳುವ ಮೊದಲು 2011 ಮತ್ತು 2013ರ ಅವಧಿಯಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಶರ್ಮಾ ಅವರನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದಿಂದ ಅನುಮತಿ ಪಡೆದ ನಂತರ ಸಿಬಿಐ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಕೇಂದ್ರ ತನಿಖಾ ಸಂಸ್ಥೆಯು ಆಗಿನ ವಾಯುಪಡೆಯ ವೈಸ್ ಮಾರ್ಷಲ್ ಜಸ್ಬೀರ್ ಸಿಂಗ್ ಪನೇಸರ್ (ಈಗ ನಿವೃತ್ತ), ಉಪ ಮುಖ್ಯ ಪರೀಕ್ಷಾ ಪೈಲಟ್ ಎಸ್ ಎ ಕುಂಟೆ, ಆಗಿನ ವಿಂಗ್ ಕಮಾಂಡರ್ ಥಾಮಸ್ ಮ್ಯಾಥ್ಯೂ ಮತ್ತು ಗ್ರೂಪ್ ಕ್ಯಾಪ್ಟನ್ ಎನ್ ಸಂತೋಷ್ ಅವರನ್ನು ದೋಷಾರೋಪಪಟ್ಟಿಯಲ್ಲಿ ಹೆಸರಿಸಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ವಾಯುಪಡೆಯು ನಿಗದಿಪಡಿಸಿದ 6,000 ಮೀಟರ್ ಆಗಸದ ಕಾರ್ಯಾಚರಣೆಯ ನಿಯತಾಂಕವನ್ನು ಪೂರೈಸದೆ ಅನರ್ಹವಾಗಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್‌ನ 12 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಕಂಪನಿಗೆ ಅನೂಕೂಲಕರ ವಾತಾವರಣ ಸೃಷ್ಟಿಸಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಆಗಿನ ಐಎಎಫ್ ಮುಖ್ಯಸ್ಥ ಎಸ್‌ಪಿ ತ್ಯಾಗಿ ಹೆಲಿಕಾಪ್ಟರ್‌ಗಳ ಆಗಸದ ಕಾರ್ಯಾಚರಣೆಯ ನಿಯತಾಂಕವನ್ನು 6,000 ಮೀಟರ್‌ಗಳಿಂದ 4,500 ಮೀಟರ್‌ಗೆ ಇಳಿಸಲು ಶಿಫಾರಸು ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಬದಲಾವಣೆಗಳನ್ನು ಐಎಎಫ್ ಬಲವಾಗಿ ವಿರೋಧಿಸಿತ್ತು ಆದರೆ, ತ್ಯಾಗಿ ಮುಖ್ಯಸ್ಥರಾದಾಗ ಅವರು ಅದನ್ನು ಶಿಫಾರಸು ಮಾಡಿದರು ಎಂದು ಸಂಸ್ಥೆ ಆರೋಪಿಸಿದೆ.
ಫಿನ್‌ಮೆಕಾನಿಕಾ ಮತ್ತು ಆಗಸ್ಟಾ ವೆಸ್ಟ್‌ಲ್ಯಾಂಡ್ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಕ್ರಿಶ್ಚಿಯನ್ ಮೈಕೆಲ್, ಗೈಡೋ ಹಾಶ್ಕೆ ಮತ್ತು ಕಾರ್ಲೋಸ್ ಗೆರೋಸಾ ಎಂಬ ಮೂವರು ಮಧ್ಯವರ್ತಿಗಳ ಮೂಲಕ ತ್ಯಾಗಿ ಮತ್ತು ಅವರ ಸೋದರ ಸಂಬಂಧಿಗಳಾದ ರಾಜೀವ್, ಸಂದೀಪ್ ಮತ್ತು ಜೂಲಿ ಅವರಿಗೆ ಲಂಚ ನೀಡಿ ನೀಡಿ ಡೀಲ್ ಕುದುರಿಸಲಾಗಿದೆ ಎಂದು ಸಿಬಿಐ ಹೇಳಿದೆ.
ಮಧ್ಯವರ್ತಿ ಮೈಕೆಲ್ ಅವರ ಸಂಸ್ಥೆಗಳು 3,600 ಕೋಟಿ ರೂಪಾಯಿಗಳ ಒಪ್ಪಂದವನ್ನು ಕುದುರಿಸಲು ಸುಮಾರು 42.27 ಮಿಲಿಯನ್ ಯುರೋ ಪಡೆದಿವೆ ಎಂದು ಸಿಬಿಐ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.