ಗ್ವಾಲಿಯರ್ (ಮಧ್ಯಪ್ರದೇಶ): ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಇಂದು (ಶನಿವಾರ) ರಾತ್ರಿ ಗ್ವಾಲಿಯರ್‌ಗೆ ಭೇಟಿ ನೀಡಲಿದ್ದು, ಮಧ್ಯಾಹ್ನದ ಹೊತ್ತಿಗೆ ಜೋಡಿ ಕೊಲೆ ಪ್ರಕರಣ ವರದಿಯಾಗಿದೆ. ನಗರದ ಹೊರವಲಯದಲ್ಲಿ ಇಬ್ಬರು ಅಪರಿಚಿತರ ಶವಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿವಪುರಿಗೆ ಸಂಪರ್ಕ ಕಲ್ಪಿಸುವ ಶೀತಲ್‌ಮಠ ಮಂದಿರ ರಸ್ತೆ ಪಕ್ಕದಲ್ಲಿ ಶವಗಳು ಪತ್ತೆಯಾಗಿವೆ. ಇಬ್ಬರನ್ನೂ ಕೊಲೆ ಮಾಡಲಾಗಿದೆ. ಅದರಲ್ಲಿ ಒಬ್ಬ ಅಂಗವಿಕಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ತಿಳಿಸಿದ್ದಾರೆ.
'ಕೊಲೆಯಾದವರ ಗುರುತು ಪತ್ತೆಗೆ ಪ್ರಯತ್ನ ಮುಂದುವರಿದಿದೆ. ತಲೆಗಳ ಮೇಲೆ ಕಲ್ಲು ಎತ್ತಿಹಾಕಲಾಗಿದೆ. ಕಂಪೂ ಠಾಣೆಯ ಪೊಲೀಸರು ಹಾಗೂ ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ' ಎಂದೂ ಅವರು ಹೇಳಿದ್ದಾರೆ.
ಶವಗಳು ಪತ್ತೆಯಾದ ಸ್ಥಳದ ಸಮೀಪದಲ್ಲೇ ರಕ್ತಸಿಕ್ತ ಕಲ್ಲುಗಳು ಸಿಕ್ಕಿವೆ. ಅವುಗಳನ್ನೂ ಪರಿಶೀಲಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕ್ರಿಕೆಟ್ ಕ್ರೀಡಾಂಗಣದ ಉದ್ಘಾಟನೆ ಹಾಗೂ ಮಧ್ಯಪ್ರದೇಶ ಕ್ರಿಕೆಟ್ ಲೀಗ್‌ಗೆ ಚಾಲನೆ ನೀಡಲು ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ರಾತ್ರಿ ಗ್ವಾಲಿಯರ್‌ಗೆ ಬರಲಿದ್ದಾರೆ.
ಜೋಡಿ ಕೊಲೆ ಪ್ರಕರಣ ವರದಿಯಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಜಿತು ಪತ್ವಾರಿ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಗೃಹ ಖಾತೆಯನ್ನೂ ಹೊಂದಿರುವ ಸಿಎಂ ಯಾದವ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.