ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರ ಭೋಪಾಲ್ ಭೇಟಿ ನಿಗದಿಯಾಗಿರುವ ಬೆನ್ನಲ್ಲೇ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿಯವರು ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೋಟಾಗಾಗಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಸಕಾರಾತ್ಮಕ ಪ್ರತಿಕ್ರಿಯೆ ನೀಡುವ ವಿಶ್ವಾಸವಿದೆ ಎಂದೂ ಅವರು ಹೇಳಿದ್ಧಾರೆ.
ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸದ ಬಗ್ಗೆ ಕಳೆದ ವಾರ ಉಮಾ ಭಾರತಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರಧಾನಿ ಅವರಿಗೆ ಭೋಪಾಲ್ ಭೂಮಿಗೆ ಸ್ವಾಗತ. ಮಹಿಳೆಯರಿಗೆ ಒಬಿಸಿ ಮೀಸಲಾತಿಯ ಬಗ್ಗೆ ಅವರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಸೋಮವಾರ ಬೆಳಿಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭೋಪಾಲ್‌ನಲ್ಲಿ ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿರುವುದು ಸಂತಸ ತಂದಿದೆ. ಆದರೆ, ಒಬಿಸಿ ಮಹಿಳೆಯರಿಗೆ ಮೀಸಲಾತಿ ನೀಡುವ ಅವಕಾಶ ಇಲ್ಲದ ಕಾರಣ ಸ್ವಲ್ಪ ನಿರಾಶೆಗೊಂಡಿದ್ದೇನೆ ಎಂದು ಉಮಾಭಾರತಿ ಕಳೆದ ವಾರ ಹೇಳಿದ್ದರು.
‘ನಾನು ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿ ಹಲವು ವರ್ಷಗಳಾದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದೆ. ಐದು ವರ್ಷಗಳ ಕಾಲ ವಿರಾಮ ತೆಗೆದುಕೊಳ್ಳಲು ಯೋಚಿಸಿದ್ದೆ. ನಾನು ರಾಜಕೀಯ ಬಿಟ್ಟಿದ್ದೇನೆ ಎಂದು ಜನ ಭಾವಿಸಿದ್ದರು. ನಾನು ರಾಜಕೀಯವನ್ನು ಬಿಟ್ಟಿಲ್ಲ ಎಂದು ಹೇಳಿ ಹೇಳಿ ಸಾಕಾಗಿದೆ’ ಎಂದು ಸಾಗರ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯಲ್ಲಿ ಅವರು ಹೇಳಿದ್ದರು.
ಉತ್ತರ ಪ್ರದೇಶದ ಝಾನ್ಸಿ ಲೋಕಸಭಾ ಕ್ಷೇತ್ರದಿಂದ ಅವರು ಕಳೆದ ಚುನಾವಣೆಯಲ್ಲಿ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.