ಅಹಮದಾಬಾದ್: ಅತಿ ವೇಗದ ಚಾಲನೆ ಕುರಿತು ಆರಂಭವಾದ ವಾದವು 23 ವರ್ಷದ ವಿದ್ಯಾರ್ಥಿಯೊಬ್ಬರ ಕೊಲೆಯಲ್ಲಿ ಅಂತ್ಯ ಕಂಡಿದೆ. ಕಾರಿನ ಚಾಲಕನೊಬ್ಬ ವಿದ್ಯಾರ್ಥಿಯನ್ನು ಚಾಕುವಿನಿಂದ ಹಲವು ಬಾರಿ ಚುಚ್ಚಿ ಹತ್ಯೆ ಮಾಡಿದ್ದಾರೆ.
ಭಾನುವಾರ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದೆ. ಮುದ್ರಾ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿಎ) ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಎ ಓದುತ್ತಿದ್ದ ಪ್ರಿಯಾಂಶು ಜೈನ್ ಮೃತ ವಿದ್ಯಾರ್ಥಿ. ಬೇಕರಿಯಲ್ಲಿ ಕೇಕ್ ಖರೀದಿಸಿ ಪ್ರಿಯಾಂಶು ಹಾಗೂ ಆತನ ಸ್ನೇಹಿತ ಬೈಕನಲ್ಲಿ ಹಾಸ್ಟೆಲ್‌ಗೆ ವಾಪಸಾಗುತ್ತಿದ್ದ ವೇಳೆ ಕಾರು ಚಾಲಕನೊಂದಿಗೆ ಮಾತಿನ ಚಕಮಕಿ ನಡೆದಿದೆ.
‘ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ ಕುರಿತು ವಾದ ನಡೆದ ಬಳಿಕ ವಿದ್ಯಾರ್ಥಿಗಳು ಬೈಕ್‌ನಲ್ಲಿ ಮುಂದೆ ಸಾಗಿದ್ದಾರೆ. 200 ಮೀಟರ್‌ನಿಂದ ಅವರನ್ನು ಹಿಂಬಾಲಿಸಿದ ಕಾರಿನ ಚಾಲಕ ನಂತರ ಅವರನ್ನು ತಡೆದಿದ್ದಾರೆ. ಬಳಿಕ, ಕಾರಿನಲ್ಲಿದ್ದ ಚಾಕುವಿನಿಂದ ಪ್ರಿಯಾಂಶು ಅವರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಅಹಮದಾಬಾದ್ ಎಸ್‌ಪಿ ಓಂ ಪ್ರಕಾಶ್ ಜಾಟ್ ವಿವರಿಸಿದರು.
‘ಪ್ರಿಯಾಂಶು ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತೀವ್ರವಾಗಿ ಆಂತರಿಕ ರಕ್ತಸ್ರಾವ ಆಗಿದ್ದರಿಂದ ಪ್ರಿಯಾಂಶು ಮೃತಪಟ್ಟರು. ಆರೋಪಿಯ ಗುರುತು ಪತ್ತೆಯಾಗಿಲ್ಲ. ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.