ಕೃಷ್ಣಗಿರಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದು, ರಾಜಕೀಯ ಪಕ್ಷಗಳು ಮಾಧ್ಯಮಗಳಲ್ಲಿ 'ಸುಳ್ಳು ಸುದ್ದಿ' ಹರಡುತ್ತಿವೆ ಎಂದು ಭಾನುವಾರ ಕಿಡಿಕಾರಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಳನಿಸ್ವಾಮಿ ಅವರು, ತಮ್ಮ ಪಕ್ಷವು ಮೈತ್ರಿಯನ್ನು ತ್ಯಜಿಸುವ ದೃಢ ನಿರ್ಧಾರವನ್ನು ಕಳೆದ ವರ್ಷವೇ ಕೈಗೊಂಡಿದೆ. ಹಾಗಾಗಿ ಈ ಬಗ್ಗೆ ಮಾಧ್ಯಮಗಳು ಮತ್ತೆ ಮತ್ತೆ ಪ್ರಶ್ನಿಸಬಾರದು ಎಂದು ಮನವಿ ಮಾಡಿದ್ದಾರೆ.
'ಬಿಜೆಪಿಯೊಂದಿಗೆ ಎಐಎಡಿಎಂಕೆ ವಿಭಿನ್ನ ಸಂಬಂಧವನ್ನು ಹೊಂದಿದೆ ಎಂದು ಕೆಲವು ರಾಜಕೀಯ ಪಕ್ಷಗಳು ಈಗಲೂ ಹೇಳುತ್ತಿವೆ. ಈ ಬಗ್ಗೆ ನಾನು ಹಾಗೂ ಪಕ್ಷದ ಹಿರಿಯ ಮುಖಂಡರು ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದೇವೆ. ಇದೀಗ ಮತ್ತೆ ಹೇಳುತ್ತಿದ್ದೇನೆ. ನಾವು ಬಿಜೆಪಿಯೊಂದಿಗೆ ಯಾವುದೇ ರೀತಿಯ ಮೈತ್ರಿಯನ್ನು ಹೊಂದಿಲ್ಲ' ಎಂದಿದ್ದಾರೆ.
ಇದೇ ವೇಳೆ ಅವರು, ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವ ನಿರ್ಣಯವನ್ನು ಪಕ್ಷವು 2023ರ ಸೆಪ್ಟೆಂಬರ್ 25ರಂದು ಅವಿರೋಧವಾಗಿ ಕೈಗೊಂಡಿದೆ ಎಂದೂ ನೆನಪಿಸಿದ್ದಾರೆ.
'ನಾನು ಪುನಃ ಹೇಳುತ್ತಿದ್ದೇನೆ. ಎಐಎಡಿಎಂಕೆ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿಲ್ಲ. ಪಕ್ಷದ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಾಗಲೇ ಈ ಬಗ್ಗೆ ಘೋಷಣೆ ಮಾಡಿದ್ದೇವೆ. ಆದಾಗ್ಯೂ, ಕೆಲವು ರಾಜಕೀಯ ಪಕ್ಷಗಳು ಕಳೆದ ಐದು ತಿಂಗಳಿಂದ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿವೆ. ಈ ವದಂತಿಗಳನ್ನು ನಾವು ಸಂಪೂರ್ಣ ಅಲ್ಲಗಳೆಯುತ್ತಿದ್ದೇವೆ' ಎಂದು ತಿಳಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿದ ಅವರು, ಸೂಕ್ತ ಸಂದರ್ಭದಲ್ಲಿ ಆ ಬಗ್ಗೆ ನಿರ್ಧರಿಸುತ್ತೇವೆ ಎಂದೂ ಹೇಳಿದ್ದಾರೆ.
ಕಾಂಗ್ರೆಸ್‌ನೊಂದಿಗೆ ಡಿಎಂಕೆ ಸೀಟು ಹಂಚಿಕೆ ಮಾತುಕತೆ ನಡೆಸುತ್ತಿರುವ ಬಗ್ಗೆ ವಾಗ್ದಾಳಿ ನಡೆಸಿದ ಪಳನಿಸ್ವಾಮಿ, ಆಡಳಿತಾರೂಢ ಪಕ್ಷವು ತಮಿಳುನಾಡಿನ ಜನರ ಮೇಲೆ ನಂಬಿಕೆ ಇಡುವ ಬದಲು ಮೈತ್ರಿಯಲ್ಲಿ ವಿಶ್ವಾಸವಿಟ್ಟಿದೆ ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.