ADVERTISEMENT

ಎನ್‌ಡಿಎ ತೊರೆದ ಎಐಎಡಿಎಂಕೆ: ಬಿಜೆಪಿ ನಾಯಕರ ನಡೆ ವಿರುದ್ಧ ಪಕ್ಷ ಕಿಡಿ

ಪಿಟಿಐ
Published 25 ಸೆಪ್ಟೆಂಬರ್ 2023, 14:14 IST
Last Updated 25 ಸೆಪ್ಟೆಂಬರ್ 2023, 14:14 IST
<div class="paragraphs"><p>ಎಡಪ್ಪಾಡಿ ಕೆ. ಪಳನಿಸ್ವಾಮಿ</p></div>

ಎಡಪ್ಪಾಡಿ ಕೆ. ಪಳನಿಸ್ವಾಮಿ

   

ಚೆನ್ನೈ: ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದೊಂದಿಗಿನ ನಾಲ್ಕು ವರ್ಷಗಳ ಮೈತ್ರಿಯಿಂದ ಹೊರ ಬಂದಿರುವುದಾಗಿ ಎಐಎಡಿಎಂಕೆ ಸೋಮವಾರ ಹೇಳಿದೆ. 2024ರ ಲೋಕಸಭಾ ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸಲು ಯೋಜನೆ ರೂಪಿಸಲಾಗುವುದು ಎಂದು ಪಕ್ಷ ಹೇಳಿದೆ.

ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಅಧ್ಯಕ್ಷ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಂಡಿದೆ.

ADVERTISEMENT

ಪಕ್ಷದ ಈ ನಿರ್ಧಾರವನ್ನು ಸಂಭ್ರಮಿಸಿರುವ ದ್ರಾವಿಡ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಆ ಪಕ್ಷವನ್ನು ಮುನ್ನಡೆಸುತ್ತಿರುವ ರೀತಿ ಕುರಿತು ಪಳನಿಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕರೆ ಮಾಡಿ ವಿವರಿಸಿದ ನಂತರ, ಎನ್‌ಡಿಎಯಿಂದ ಹೊರ ಹೋಗುವ ಇಂಗಿತ ವ್ಯಕ್ತಪಡಿಸಿದ್ದರು.

ದ್ರಾವಿಡ ಮುಖಂಡ ಸಿ.ಎನ್. ಅಣ್ಣಾದೊರೈ ವಿರುದ್ಧ ಹೇಳಿಕೆಗೆ ಅಣ್ಣಾಮಲೈ ಕ್ಷಮೆ ಕೋರುವಂತೆ ಪಕ್ಷ ಆಗ್ರಹಿಸಿತ್ತು. ಎನ್‌ಡಿಎ ಒಕ್ಕೂಟದಿಂದ ಹೊರ ನಡೆಯುವ ನಿರ್ಣಯವನ್ನು ಪಕ್ಷವು ಸರ್ವಾನುಮತದಿಂದ ಅಂಗೀಕರಿಸಿತು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಿತು’ ಎಂದು ಪಕ್ಷದ ಹಿರಿಯ ಮುಖಂಡ ಕೆ.ಪಿ. ಮುನುಸ್ವಾಮಿ ತಿಳಿಸಿದರು.

ಎನ್‌ಡಿಎ ಜತೆಗಿನ ಮೈತ್ರಿ ಅಂತ್ಯಕ್ಕೆ ಕಾರಣವೇನು ಎಂಬುದರ ಕುರಿತು ಅವರು ಏನನ್ನೂ ಹೇಳಲಿಲ್ಲ. ಆದರೆ ರಾಜ್ಯದಲ್ಲಿನ ಬಿಜೆಪಿ ನಾಯಕತ್ವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಲಾಗಿದೆ ಎಂದಿದ್ದಾರೆ.

ಅಣ್ಣಾದೊರೈ ಹಾಗೂ ಜೆ.ಜಯಲಲಿತಾ ಅವರನ್ನು ರಾಜ್ಯದಲ್ಲಿರುವ ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಮಧುರೈನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಎಐಎಡಿಎಂಕೆಯನ್ನು ಕಡೆಗಣಿಸಿ, ಅದರ ನೀತಿಗಳನ್ನು ಬಿಜೆಪಿ ನಾಯಕರು ಟೀಕಿಸಿದ್ದರು. ಕಳೆದ ಒಂದು ವರ್ಷದಿಂದ ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈ ಎಲ್ಲಾ ಅಂಶಗಳನ್ನು ಪಕ್ಷವು ತೆಗೆದುಕೊಂಡ ನಿರ್ಣಯದಲ್ಲಿ ಸೇರಿಸಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಎಐಎಡಿಎಂಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಕ್ಷದ ನಡೆಯನ್ನು ಸ್ವಾಗತಿಸಿದ್ದಾರೆ. ‘ಧನ್ಯವಾದಗಳು, ಪುನಃ ನಮ್ಮ ಬಳಿ ಬರಬೇಡಿ’ (#Nandri_Meendum Varatheergal) ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ಅನಿಸಿಕೆಗಳನ್ನು ಎಕ್ಸ್‌ ತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.