ADVERTISEMENT

ಪಳನಿಸ್ವಾಮಿ ಪರವಾಗಿ ಬಲಪ್ರದರ್ಶನಕ್ಕೆ ವೇದಿಕೆಯಾದ ಎಐಎಡಿಎಂಕೆ ಸಭೆ

ಪಿಟಿಐ
Published 23 ಜೂನ್ 2022, 12:38 IST
Last Updated 23 ಜೂನ್ 2022, 12:38 IST
ಚೆನ್ನೈನಲ್ಲಿ ಗುರುವಾರ ನಡೆದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಮುಖಂಡರ ಘೋಷಣೆಗಳ ನಡುವೆಯೇ ಮಾಜಿ ಮುಖ್ಯಮಂತ್ರಿ, ಪಕ್ಷದ ಸಹ ಸಂಯೋಜಕ ಒ.ಪನ್ನೀರ್‌ಸೆಲ್ವಂ ಅವರು ಸಭೆಯಿಂದ ನಿರ್ಗಮಿಸಿದರು –ಪಿಟಿಐ ಚಿತ್ರ
ಚೆನ್ನೈನಲ್ಲಿ ಗುರುವಾರ ನಡೆದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಮುಖಂಡರ ಘೋಷಣೆಗಳ ನಡುವೆಯೇ ಮಾಜಿ ಮುಖ್ಯಮಂತ್ರಿ, ಪಕ್ಷದ ಸಹ ಸಂಯೋಜಕ ಒ.ಪನ್ನೀರ್‌ಸೆಲ್ವಂ ಅವರು ಸಭೆಯಿಂದ ನಿರ್ಗಮಿಸಿದರು –ಪಿಟಿಐ ಚಿತ್ರ   

ಚೆನ್ನೈ: ಮುಖಂಡರ ಸಮ್ಮುಖದಲ್ಲಿಯೇ ವಾಕ್ಸಮರ, ಕೂಗಾಟ, ವೇದಿಕೆಯತ್ತ ಬಾಟಲ್‌ ಎಸೆಯಲಾದ ಘಟನೆಗಳಿಗೆ ಗುರುವಾರ ಇಲ್ಲಿ ನಡೆದ ಎಐಎಡಿಎಂಕೆಯ ಸಾಮಾನ್ಯ ಸಭೆ ಸಾಕ್ಷಿಯಾಯಿತು.

‘ಪಕ್ಷಕ್ಕೆ ಏಕ ನಾಯಕತ್ವ ವ್ಯವಸ್ಥೆ ಜಾರಿಗೆ ತರಬೇಕು’ ಎಂಬುದೇ ಸಭೆಯ ಏಕೈಕ ಬೇಡಿಕೆ’ ಎಂದು ಪಟ್ಟುಹಿಡಿದ ಸದಸ್ಯರು, ಸಭೆಯ ಕಾರ್ಯಸೂಚಿಯಲ್ಲಿದ್ದ ಎಲ್ಲ 23 ಪ್ರಸ್ತಾವ ಮತ್ತು ನಿರ್ಣಯಗಳನ್ನು ಸಾರಾಸಗಟಾಗಿ ತಿರಸ್ಕರಿಸಿದರು.

ಪಕ್ಷದ ಜಂಟಿ ಸಂಯೋಜಕರಾದ ಎಡಪ್ಪಾಡಿ ಕೆ.ಪಳನಿಸ್ವಾಮಿ (ಇಪಿಎಸ್‌) ಅವರ ಪರವಾಗಿ ಘೋಷಣೆಗಳನ್ನು ಕೂಗಲಾಯಿತು. ಗೊಂದಲ, ಕೂಗಾಟದ ನಡುವೆಯೂ ಸಂಯೋಜಕ, ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ (ಒಪಿಎಸ್) ಸಭೆಯಿಂದ ಮಧ್ಯದಲ್ಲಿಯೇ ನಿರ್ಗಮಿಸಿದರು. ಒಟ್ಟಾರೆಯಾಗಿ ಪಳನಿಸ್ವಾಮಿ ಪರವಾಗಿ ಬಲಾಬಲ ಪ್ರದರ್ಶನಕ್ಕೂ ಸಭೆ ವೇದಿಕೆಯಾಯಿತು.

ADVERTISEMENT

ಸಭೆಯು ಆರಂಭವಾದಂತೆ ಪೂರ್ವ ನಿರ್ಧರಿತ ನಿರ್ಣಯಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಆಗ, ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿರಿಯ ಮುಖಂಡ ಸಿ.ವಿ.ಷಣ್ಮುಗಂ ಅವರು, ‘ಪಕ್ಷಕ್ಕೆ ಏಕ ನಾಯಕತ್ವ ಬೇಕಾಗಿದೆ’ ಎಂದು ಪ್ರತಿಪಾದಿಸಿದರು. ಉಪ ಕಾರ್ಯದರ್ಶಿ ಕೆ.ಪಿ.ಮುನುಸ್ವಾಮಿ ಎಲ್ಲ ನಿರ್ಣಯಗಳನ್ನು ಸಭೆಯು ತಿರಸ್ಕರಿಸಿದೆ ಎಂದು ಘೋಷಿಸಿದರು.

ಗೊಂದಲದ ನಡುವೆಯೇ ಪಕ್ಷದ ಮುಂದಿನ ಸಾಮಾನ್ಯ ಸಭೆ ಜುಲೈ 11ರಂದು ನಡೆಯಲಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಹುಸೇನ್‌ ಅವರು ಪ್ರಕಟಿಸಿದರು. ‘ಮುಂದಿನ ಸಭೆಯಲ್ಲಿ ಇ.ಪಳನಿಸ್ವಾಮಿ ಅವರು ಬಹುತೇಕ ಪಕ್ಷದ ನಾಯಕರಾಗಿ (ಪ್ರಧಾನ ಕಾರ್ಯದರ್ಶಿ) ಆಯ್ಕೆಯಾಗುವ ಸಂಭವವಿದೆ’ ಎಂದು ಮುಖಂಡ ಮುನುಸ್ವಾಮಿ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಪನ್ನೀರ್‌ಸೆಲ್ವಂ ಅವರು ವೇದಿಕೆಯಿಂದ ನಿರ್ಗಮಿಸುವ ವೇಳೆಗೆ ಅವರತ್ತ ಬಾಟಲ್‌ ಅನ್ನು ತೂರಲಾಯಿತು. ಒಂದು ಹಂತದಲ್ಲಿ ಪೋಡಿಯಂ ಬಳಿ ನಿಂತಿದ್ದಾಗ ಅವರು ಕೆಳಗೆ ಬೀಳುವ ಹಂತದಲ್ಲಿದ್ದರು. ಕೂಡಲೇ ಅವರ ಭದ್ರತಾ ಸಿಬ್ಬಂದಿ ನೆರವಿಗೆ ಬಂದರು. ಸಭಾಂಗಣದಿಂದ ಹೊರಬರುವಾಗ ನಿರ್ಗಮನ ದ್ವಾರದ ಬಳಿ ಇದ್ದಾಗಲೂ ಅವರತ್ತ ಬಾಟಲ್ ತೂರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.