ನವದೆಹಲಿ:ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತಾವು ಅನ್ವೇಷಿಸುವ ಯಾವುದೇ ತಂತ್ರಜ್ಞಾನ ಮತ್ತು ಉತ್ಪನ್ನದ ಮೇಲೆ ಸಮಾನ ಬೌದ್ಧಿಕ ಆಸ್ತಿ ಹಕ್ಕನ್ನು (ಐಪಿಆರ್) ಹೊಂದಿರುತ್ತಾರೆ. ಶಿಕ್ಷಣ ಸಂಸ್ಥೆಗಳು ಈ ಹಕ್ಕನ್ನು ಅನ್ವೇಷಕರ ಜತೆಗೂ ಹಂಚಿಕೊಳ್ಳಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಮಿತಿ (ಎಐಸಿಟಿಇ) ಹೇಳಿದೆ.
ಈ ಸಂಬಂಧಎಐಸಿಟಿಇ, ‘ರಾಷ್ಟ್ರೀಯ ಅನ್ವೇಷಣೆ ಮತ್ತು ನವೋದ್ಯಮ ನೀತಿ’ಯನ್ನು ಜಾರಿಗೆ ತಂದಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಒಂದೇ ನೀತಿಯನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ನೀತಿಯನ್ನು ಜಾರಿಗೆ ತರಲಾಗಿದೆ.
ಅನ್ವೇಷಿತ ಉತ್ಪನ್ನ ಅಥವಾ ತಂತ್ರಜ್ಞಾನದ ಬೌದ್ಧಿಕ ಆಸ್ತಿ ಹಕ್ಕಿನ ಬಗ್ಗೆ ವ್ಯಾಜ್ಯಗಳಿದ್ದರೆ, ಅದನ್ನು ಐವರು ಸದಸ್ಯರ ಸಮಿತಿಯ ಮೂಲಕ ಬಗೆಹರಿಸಿಕೊಳ್ಳಬೇಕು. ಇಬ್ಬರು ಪ್ರಾಧ್ಯಾಪಕರು, ಹಳೆ ವಿದ್ಯಾರ್ಥಿ ಸಂಘದ ಇಬ್ಬರು ಸದಸ್ಯರು ಅಥವಾ ಇಬ್ಬರು ವಿಷಯ ಪರಿಣತರು ಮತ್ತು ಬೌದ್ಧಿಕ ಆಸ್ತಿ ಹಕ್ಕು ವಿಷಯದಲ್ಲಿ ಪರಿಣತಿ ಹೊಂದಿರುವ ಒಬ್ಬ ವಕೀಲರು ಈ ಸಮಿತಿಯಲ್ಲಿ ಇರಬಹುದು.
ಸ್ವತಂತ್ರ ಅನ್ವೇಷಣೆ
* ಶಿಕ್ಷಣ ಸಂಸ್ಥೆಯಿಂದ ಯಾವುದೇ ರೀತಿಯ ಹಣಕಾಸು ನೆರವು, ಪ್ರಯೋಗಾಲಯದ ನೆರವು ಪಡೆದುಕೊಳ್ಳದೇ ನಡೆಸಿದ ಅನ್ವೇಷಣೆ ಸ್ವತಂತ್ರ ಅನ್ವೇಷಣೆಯಾಗುತ್ತದೆ
* ವಿದ್ಯಾರ್ಥಿಗಳಾಗಲೀ, ಪ್ರಾಧ್ಯಾಪಕರಾಗಲೀ ಕಾಲೇಜು ಅವಧಿಯಲ್ಲಿ, ತರಗತಿಯ ಅವಧಿಯಲ್ಲಿ ಅನ್ವೇಷಣೆ ನಡೆಸದೇ ಇದ್ದರೆ ಅದೂ ಸ್ವತಂತ್ರ ಅನ್ವೇಷಣೆಯಾಗುತ್ತದೆ
* ಈ ಸ್ವರೂಪದ ಅನ್ವೇಷಣೆಯಲ್ಲಿ, ಆ ಅನ್ವೇಷಣೆ ಮೇಲೆ ಸಂಸ್ಥೆಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಆ ಅನ್ವೇಷಣೆಯ ಸಂಪೂರ್ಣ ಹಕ್ಕು ವಿದ್ಯಾರ್ಥಿಗಳು ಅಥವಾ ಪ್ರಾಧ್ಯಾಪಕರದ್ದಾಗಿರುತ್ತದೆ
* ಈ ಅನ್ವೇಷಿತ ತಂತ್ರಜ್ಞಾನ ಅಥವಾ ಉತ್ಪನ್ನವನ್ನು ವಾಣಿಜ್ಯ ಉದ್ದೇಶಕ್ಕೆಬೇರೆ ಕಂಪನಿಗಳಿಗೆ ಮಾರಾಟ ಮಾಡುವ ನಿರ್ಧಾರ ಆಯಾ ವಿದ್ಯಾರ್ಥಿಗಳು ಅಥವಾ ಪ್ರಾಧ್ಯಾಕರದ್ದಾಗಿರುತ್ತದೆ
*ಅನ್ವೇಷಕರು ತಮ್ಮ ಭೌತಿಕ ಉತ್ಪನ್ನಗಳಿಗೆ ವಾಣಿಜ್ಯ ಸಂಸ್ಥೆಗಳಿಂದ ಗರಿಷ್ಠ ಶೇ 4ರಷ್ಟು ಗೌರವಧನ ಪಡೆಯಬಹುದು. ಸಂಪೂರ್ಣ ತಂತ್ರಾಂಶ ಆಧರಿತ ಉತ್ಪನ್ನವಾಗಿದ್ದರೆ, ಗೌರವಧನದ ಪ್ರಮಾಣವನ್ನು ಕಂಪನಿಯ ಜತೆ ಚರ್ಚಿಸಿ ನಿಗದಿಪಡಿಸಿಕೊಳ್ಳಬಹುದು
ಪ್ರಾಯೋಜಿತ ಅನ್ವೇಷಣೆ
* ಶೈಕ್ಷಣಿಕ ಸಂಸ್ಥೆಯ ಆರ್ಥಿಕ ನೆರವು ಮತ್ತು ಪ್ರಯೋಗಾಲಯವನ್ನು ಉಪಯೋಗಿಸಿಕೊಂಡು ನಡೆಸಿದ ಅನ್ವೇಷಣೆಗಳು ಪ್ರಾಯೋಜಿತ ಅನ್ವೇಷಣೆಯಾಗುತ್ತದೆ
* ಪಠ್ಯಕ್ರಮದ ಭಾಗವಾಗಿ, ಕಾಲೇಜು ಮತ್ತು ತರಗತಿ ಅವಧಿಯಲ್ಲಿ ನಡೆಸಿದ ಅನ್ವೇಷಣೆಯೂಪ್ರಾಯೋಜಿತ ಅನ್ವೇಷಣೆಯಾಗುತ್ತದೆ
* ಈ ಸ್ವರೂಪದ ಅನ್ವೇಷಣೆಯಲ್ಲಿ ಶೈಕ್ಷಣಿಕ ಸಂಸ್ಥೆ ಮತ್ತು ಅನ್ವೇಷಕರು (ವಿದ್ಯಾರ್ಥಿಗಳು/ಪ್ರಾಧ್ಯಾಪಕ) ಉತ್ಪನ್ನದ ಮೇಲೆ ಸಮಾನ ಬೌದ್ಧಿಕ ಆಸ್ತಿ ಹಕ್ಕು ಹೊಂದಿರುತ್ತಾರೆ
* ಅನ್ವೇಷಕರು ಮತ್ತು ಶೈಕ್ಷಣಿಕ ಸಂಸ್ಥೆಯು ಉತ್ಪನ್ನ ಅಥವಾ ತಂತ್ರಜ್ಞಾನವನ್ನು ವಾಣಿಜ್ಯ ಸಂಸ್ಥೆಗಳಿಗೆ ಜಂಟಿಯಾಗಿ ನೀಡಬಹುದಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.