ADVERTISEMENT

ಕಾರು ಅಪಘಾತ: ಸಚಿವ ಶ್ರೀಪಾದ್ ನಾಯಕ್ ಆರೋಗ್ಯದಲ್ಲಿ ಸುಧಾರಣೆ

ಗೋವಾ ಆಸ್ಪತ್ರೆಯಲ್ಲಿ ಚಿಕಿತ್ಸೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಪಿಟಿಐ
Published 13 ಜನವರಿ 2021, 5:28 IST
Last Updated 13 ಜನವರಿ 2021, 5:28 IST
ಕೇಂದ್ರ ಸಚಿವ ಶ್ರೀಪಾದ್ ನಾಯಕ್
ಕೇಂದ್ರ ಸಚಿವ ಶ್ರೀಪಾದ್ ನಾಯಕ್   

ಪಣಜಿ: ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಗೋವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಅವರ ಆರೋಗ್ಯ ಸುಧಾರಿಸಿದ್ದು, ಅವರಿಗೆ ನೀಡಿರುವ ವೆಂಟಿಲೇಟರ್‌ ನೆರವನ್ನು ತೆಗೆಯುವಂತೆ ದೆಹಲಿ ಏಮ್ಸ್‌ ತಜ್ಞ ವೈದ್ಯರ ತಂಡ ಸಲಹೆ ನೀಡಿದೆ.

ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್‌)ಯ ತಜ್ಞರ ತಂಡ ಮಂಗಳವಾರ ಸಂಜೆ ಸಚಿವ ನಾಯಕ್ ಅವರು ದಾಖಲಾಗಿದ್ದ ಗೋವಾದ ಸರ್ಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ಭೇಟಿ ನೀಡಿ, ಸಚಿವರ ಆರೋಗ್ಯವನ್ನು ಪರಿಶೀಲಿಸಿತು.‌ ನಂತರ ಜಿಎಂಸಿಎಚ್‌ ವೈದ್ಯರ ತಂಡದೊಂದಿಗೆ ನಾಯಕ್ ಅವರ ಆರೋಗ್ಯದ ಕುರಿತು ಚರ್ಚಿಸಿತುಎಂದು ಗೋವಾ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಜಿಎಂಸಿಎಚ್‌ನಲ್ಲಿ ಮಂಗಳವಾರ ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಏಮ್ಸ್ ತಂಡದ ಸದಸ್ಯರೊಬ್ಬರು, ‘ಸಚಿವರ ಉಸಿರಾಟ, ರಕ್ತದೊತ್ತಡ ಮತ್ತು ಇತರ ಆರೋಗ್ಯ ಅಂಶಗಳು ಸಮರ್ಪಕವಾಗಿವೆ. ಹಾಗಾಗಿ ಬುಧವಾರ (ಇಂದು) ಸಚಿವರಿಗೆ ನೀಡಿರುವ ವೆಂಟಿಲೇಟರ್‌ ತೆಗೆಯುವಂತೆ ಸಲಹೆ ನೀಡಿದ್ದೇವೆ‘ ಎಂದು ತಿಳಿಸಿದರು. ತಂಡ ಭೇಟಿ ನೀಡಿದ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡ ಹಾಜರಿದ್ದರು.

ADVERTISEMENT

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಮಂಗಳವಾರ ಜಿಎಂಸಿಎಚ್‌ಗೆ ಭೇಟಿ ನೀಡಿ ನಾಯಕ್ ಅವರ ಆರೋಗ್ಯ ವಿಚಾರಿಸಿದರು. ‘ನಾಯಕ್ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ‘ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಬಳಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಸಚಿವ ಶ್ರೀಪಾದ್ ನಾಯಕ್ ತೀವ್ರವಾಗಿ ಗಾಯಗೊಂಡಿದ್ದರು. ಆ ಘಟನೆಯಲ್ಲಿ ನಾಯಕ್ ಅವರ ಪತ್ನಿ ವಿಜಯ ಮತ್ತು ಆಪ್ತ ಕಾರ್ಯದರ್ಶಿ ಮೃತಪಟ್ಟಿದ್ದರು. ಗಾಯಗೊಂಡಿದ್ದ ಸಚಿವರನ್ನು ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.