ನವದೆಹಲಿ: ರಾಷ್ಟ್ರಪತಿ ಭವನದ ಆವರಣದಲ್ಲಿ ಪ್ರಧಾನಿ ಮತ್ತು ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳು ಭರದಿಂದ ಸಾಗಿದ್ದರೆ, ಇತ್ತ ಕರ್ನಾಟಕದ ಬಿಜೆಪಿ ವಲಯದಲ್ಲಿ ಲೆಕ್ಕಾಚಾರಗಳದ್ದೇ ಮಾತು!
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪಕ್ಷದ ಶಾಸಕರು, ಮುಖಂಡರು ಮತ್ತವರ ಬೆಂಬಲಿಗರೆಲ್ಲ ರಾಷ್ಟ್ರ ರಾಜಧಾನಿಗೆ ದೌಡಾಯಿಸಿದ್ದಾರೆ. ‘ರಾಜ್ಯದಿಂದ ಆಯ್ಕೆಯಾಗಲಿರುವ ಸಚಿವರು ಯಾರು’ ಎಂಬ ಪ್ರಶ್ನೆಗೆ ಬುಧವಾರ ರಾತ್ರಿಯವರೆಗೂ ಉತ್ತರ ದೊರೆಯಲಿಲ್ಲ. ಬಿಜೆಪಿಯಿಂದ ಆಯ್ಕೆಯಾಗಿರುವ ರಾಜ್ಯದ ಬಹುತೇಕ ಸಂಸದರು ಸಚಿವ ಸ್ಥಾನದ ಆಕಾಂಕ್ಷೆಯೊಂದಿಗೆ ಪ್ರಧಾನಿ ಕಾರ್ಯಾಲಯದ ದೂರವಾಣಿ ಕರೆಯ ನಿರೀಕ್ಷೆಯಲ್ಲಿ ದಿನದೂಡಿದರು.
‘ಕಳೆದ ಅವಧಿಯಲ್ಲಿ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ, ರಮೇಶ ಜಿಗಜಿಣಗಿ, ಅನಂತಕುಮಾರ್ ಹೆಗಡೆ ಅವರಿಗೆ ಈ ಬಾರಿಯೂ ಅವಕಾಶ ದೊರೆಯಲಿದೆಯೇ’ ಎಂಬ ಪ್ರಶ್ನೆಗೂ ಉತ್ತರ ದೊರೆತಿರಲಿಲ್ಲ.
ಲೆಕ್ಕಾಚಾರದ್ದೇ ಮೇಲಾಟ:
ಸಚಿವ ಸ್ಥಾನದ ಹಂಚಿಕೆ ಕುರಿತು ಬಿಜೆಪಿ ವಲಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಲೆಕ್ಕಾಚಾರಗಳು ನಡೆದಿವೆ. ಸಂಪುಟ ಸೇರಲಿರುವವರು ಯಾರು ಎಂಬುದು ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಈ ವರಿಷ್ಠರು ಅನುಭವಿಗಳಿಗೆ ಅವಕಾಶ ನೀಡಬಹುದೇ, ಕಿರಿಯರಿಗೆ ಮಣೆ ಹಾಕಬಹುದೇ, ಜಾತಿ ಮತ್ತು ಪ್ರಾಂತ್ಯದ ಪ್ರಾಬಲ್ಯವನ್ನು ಆಧರಿಸಿ ಸಚಿವ ಸ್ಥಾನವನ್ನು ನೀಡಬಹುದೇ’ ಎಂಬ ಲೆಕ್ಕಾಚಾರಗಳೂ ನಡೆದಿದ್ದವು.
‘ಸಂಜೆ ದೆಹಲಿಗೆ ಬಂದ ಬಿ.ಎಸ್. ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಅಮಿತ್ ಶಾ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಸಚಿವ ಸ್ಥಾನ ಹಂಚಿಕೆ ಕುರಿತು ಅವರ ಸಲಹೆಯನ್ನು ಪಡೆದಿರುವ ಸಾಧ್ಯತೆಯೂ ಇದೆ’ ಎಂದು ಸಂಸದರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಊಹಾಪೋಹಗಳಿಗೆ ಇದು ಕಾಲವಲ್ಲ. ತಮ್ಮ ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ಪ್ರಧಾನಿಯೇ ಕೈಗೊಳ್ಳಲಿದ್ದಾರೆ. ಶಿಫಾರಸು ಖಂಡಿತ ಕೆಲಸ ಮಾಡುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.
ನಾಲ್ಕನೇ ಬಾರಿ ಸಂಸದರಾಗಿರುವ ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ, ಪಿ.ಸಿ. ಗದ್ದಿಗೌಡರ್, ಹಿರಿಯರಾದ ಜಿ.ಎಸ್. ಬಸವರಾಜ್, ಶ್ರೀನಿವಾಸ ಪ್ರಸಾದ್, ಮೂರನೇ ಬಾರಿ ಆಯ್ಕೆಯಾಗಿರುವ ಶಿವಕುಮಾರ್ ಉದಾಸಿ, ಮಹಿಳಾ ಕೋಟಾದಡಿ ಶೋಭಾ ಕರಂದ್ಲಾಜೆ ಅವರು ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಬುಧವಾರ ಸಂಜೆಯ ಹೊತ್ತಿಗೆ ಸಂಸದರೆಲ್ಲ ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತ, ‘ನಿಮಗೆ ಕರೆ ಬಂತೇ, ಅವರಿಗೆ ಕರೆ ಬಂತೇ’ ಎಂದು ಕೇಳುತ್ತಿದ್ದುದು ಸಾಮಾನ್ಯವಾಗಿತ್ತು.
ಹಾಜರಾಗುವುದಿಲ್ಲ: ಮಮತಾ
ಕೋಲ್ಕತ್ತ: ಮೋದಿ ಅವರ ಪ್ರಮಾಣವಚನ ಸ್ವಿಕಾರ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಮತಾ, ‘ಅಭಿನಂದನೆಗಳು ಮೋದಿಜಿ, ಸಂವಿಧಾನಾತ್ಮಕವಾದ ನಿಮ್ಮ ಆಮಂತ್ರಣವನ್ನು ಸ್ವೀಕರಿಸಲು ನಾನು ಮುಂದಾಗಿದ್ದೆ. ಆದರೆ ಟಿಎಂಸಿ ಕಾರ್ಯಕರ್ತರು ತಮ್ಮ 54 ಮಂದಿ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಿರುವುದು ಮಾಧ್ಯಮಗಳಿಂದ ತಿಳಿದುಬಂದಿದೆ. ಆ ಕಾರಣಕ್ಕೆ ನಾನು ಕಾರ್ಯಕ್ರಮದಿಂದ ದೂರವಿರಲು ತೀರ್ಮಾನಿಸಿದ್ದೇನೆ’ ಎಂದಿದ್ದಾರೆ.
ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದಿಂದಾಗಿ ಯಾರೂ ಸಾವನ್ನಪ್ಪಿಲ್ಲ ಎಂದು ಮಮತಾ ಹೇಳಿದ್ದಾರೆ.
ಟಿಎಂಸಿ ನಡೆಸಿದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತರ ಕುಟುಂಬದವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಹೇಳಿತ್ತು.
ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.