ಕೋಲ್ಕತ್ತ: ನೀತಿ ಆಯೋಗದ ಸಭೆಯಲ್ಲಿ ಮಾತನಾಡಲು ಸಮಯ ನಿರಾಕರಿಸಿದ್ದನ್ನು ಪ್ರತಿಭಟಿಸಿ ಹೊರನಡೆದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಈ ರೀತಿಯ ನಾಟಕ ಪ್ರದರ್ಶಿಸಲಾಗಿದೆ ಎಂದು ಟೀಕಿಸಿದೆ.
‘ನೀತಿ ಆಯೋಗದಲ್ಲಿ ಬ್ಯಾನರ್ಜಿ ಅವರಿಗೆ ಮಾತನಾಡಲು ಸೂಕ್ತ ಸಮಯಾವಕಾಶ ನೀಡಲಾಗಿತ್ತು. ಸಭೆಯಿಂದ ಹೊರನಡೆಯುವ ನಾಟಕ ಪ್ರದರ್ಶಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಅವರು ಸಭೆಗೆ ಹಾಜರಾಗಿದ್ದರು. ಅವರು ವಿರೋಧ ಪಕ್ಷದ ನಾಯಕಿಯಾಗಿ ತಮ್ಮನ್ನು ಬಿಂಬಿಸಿಕೊಂಡಿಸಿದ್ದಾರೆ. ಆಡಳಿತ ನಡೆಸುವ ಮಂತ್ರಿಯಾಗಿ ಅಲ್ಲ’ ಎಂದು ಬಿಜೆಪಿ ಸಂಸದ ಸಮಿಕ್ ಭಟ್ಟಾಚಾರ್ಯ ಕಿಡಿಕಾರಿದ್ದಾರೆ.
ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳ ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಗೈರಾಗಿದ್ದರು. ಮಮತಾ ಬ್ಯಾನರ್ಜಿ ಅವರು ಮಾತ್ರ ಏಕೆ ಸಭೆಗೆ ಹಾಜರಾಗಿದ್ದರು ಎಂದು ಸಿಪಿಐ(ಎಂ) ರಾಜ್ಯಸಭಾ ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಪ್ರಶ್ನಿಸಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಇತರ ವಿರೋಧ ಪಕ್ಷಗಳನ್ನು ಸಂಪರ್ಕಿಸದೆ ಮಮತಾ ಬ್ಯಾನರ್ಜಿ ಅವರು ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ತಿಳಿಸಿದೆ.
‘ಈ ವಿದ್ಯಮಾನದ ಕುರಿತು ನಾವು ಏನೂ ಹೇಳುವುದಿಲ್ಲ. ನಾವು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದೇವೆ. ಆದರೆ, ಬ್ಯಾನರ್ಜಿ ಅವರು ಮೈತ್ರಿಕೂಟದ ಇತರ ಪಕ್ಷಗಳನ್ನು ಸಂಪರ್ಕಿಸದೆ ತಮ್ಮ ಸ್ವಂತ ನಿರ್ಧಾರದಿಂದ ಸಭೆಯಲ್ಲಿ ಭಾಗವಹಿಸಿದ್ದಾರೆ’ ಎಂದು ಕಾಂಗ್ರೆಸ್ ವಕ್ತಾರೆ ಸೌಮ್ಯ ಐಚ್ ತಿಳಿಸಿದ್ದಾರೆ.
ಮಾತನಾಡಲು ಸಮಯ ನಿರಾಕರಿಸಿದ್ದನ್ನು ಪ್ರತಿಭಟಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ನೀತಿ ಆಯೋಗದ ಸಭೆಯಿಂದ ಹೊರನಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.