ADVERTISEMENT

ಕೆಲವು ಮಾರ್ಗಗಳಲ್ಲಿ ವಿಮಾನ ಪ್ರಯಾಣ ದರ ಶೇ 61ರಷ್ಟು ಇಳಿಕೆ: ಸಚಿವ ಸಿಂದಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜೂನ್ 2023, 10:49 IST
Last Updated 8 ಜೂನ್ 2023, 10:49 IST
ವಿಮಾನ
ವಿಮಾನ    

ನವದೆಹಲಿ: ದೆಹಲಿಯಿಂದ ಹೊರಡುವ ಕೆಲವು ಮಾರ್ಗಗಳಲ್ಲಿ ವಿಮಾನ ದರವನ್ನು ಶೇ 14 ರಿಂದ 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ದೆಹಲಿಯಿಂದ ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರವನ್ನು ಶೇ 14 ರಿಂದ 61ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಲು ನಾನು ಖುಷಿಪಡುತ್ತೇನೆ. ಈ ದರ ಕಡಿತ ಸೋಮವಾರದಿಂದ (ಜೂ.6) ಜಾರಿಗೆ ಬಂದಿದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು. 

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ದೈನಂದಿನ ದರಗಳ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಸಿಂಧಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ADVERTISEMENT

ವಿಮಾನಯಾನ ಸಂಸ್ಥೆಗಳಿಗೆ ವಿಮಾನ ದರಗಳನ್ನು ನಿರ್ಧರಿಸುವ ಅಧಿಕಾರವಿದೆ. ದರಗಳನ್ನು ನಿರ್ಧರಿಸುವಾಗ ಸೀಸನ್ ಸೇರಿದಂತೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ವಿವಿಧ ವಿಮಾನಯಾನ ಸಂಸ್ಥೆಗಳ ಸಲಹಾ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ದರ ಕಡಿತ ಮಾಡುವ ಬಗ್ಗೆ ನಿರ್ಧರಿಸಲಾಗಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.