ನವದೆಹಲಿ: ವಾಯುಪಡೆಯ ಪೈಲಟ್ ಒಬ್ಬರ ಸಮಯಪ್ರಜ್ಞೆಯಿಂದ ಭಾರಿ ಅವಘಡವೊಂದು ತಪ್ಪಿದೆ. ಅಂಬಾಲ ವಾಯುನೆಲೆಯಿಂದ ಹಾರಾಟ ಆರಂಭಿಸಿದ್ದ ಜಾಗ್ವಾರ್ ಯುದ್ಧ ವಿಮಾನಕ್ಕೆ ಹಕ್ಕಿ ಡಿಕ್ಕಿಹೊಡೆದಿದ್ದರೂ ಪೈಲಟ್ ಜಾಗರೂಕತೆಯಿಂದ ಯಾವುದೇ ಅನಾಹುತವಾಗದಂತೆ ನೋಡಿಕೊಂಡು ವಿಮಾನವನ್ನು ಇಳಿಸಿದ್ದಾರೆ.
ಈ ವಿಮಾನದಲ್ಲಿ ಎರಡು ಹೆಚ್ಚುವರಿ ಇಂಧನ ಟ್ಯಾಂಕ್ ಮತ್ತು ತರಬೇತಿಗಾಗಿ ಬಳಸುತ್ತಿದ್ದ ಬಾಂಬ್‌ಗಳಿದ್ದವು. ಹಕ್ಕಿ ಡಿಕ್ಕಿ ಹೊಡೆಯುತ್ತಿದ್ದಂತೆ ಒಂದು ಎಂಜಿನ್‌ಗೆ ಹಾನಿಯಾಗಿ ವಿಫಲಗೊಂಡಿದೆ. ಈ ವೇಳೆ ಪೈಲಟ್ ಇಂಧನ ಟ್ಯಾಂಕ್ ಹಾಗೂ ಬಾಂಬ್‌ಗಳನ್ನು ನಿರ್ಜನ ಪ್ರದೇಶದಲ್ಲಿ ಬೀಳಿಸಿದ್ದಾರೆ. ನಂತರ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಒಂದು ವೇಳೆ ಬಾಂಬ್‌ಗಳು ಜನವಸತಿ ಪ್ರದೇಶದ ಮೇಲೆ ಬಿದ್ದಿದ್ದರೆ ಸಾಕಷ್ಟು ಸಾವು ನೋವು ಸಂಭವಿಸುತಿತ್ತು.
‘ಅತ್ಯಂತ ತುರ್ತು ಸಂದರ್ಭವನ್ನು ಪೈಲಟ್ ಎದುರಿಸಿದ್ದರು. ಯುವ ಪೈಲಟ್ ಕೆಲವೇ ಸೆಕೆಂಡ್‌ಗಳಲ್ಲಿ ಏನು ಮಾಡಬೇಕು ಎಂಬುದನ್ನು ತೀರ್ಮಾನಿಸಿ ಸರಿಯಾದ ಕ್ರಮ ಕೈಗೊಂಡಿದ್ದಾರೆ. ಅವರ ಚಾಣಾಕ್ಷತೆಯಿಂದ ಭಾರತೀಯ ವಾಯುಪಡೆಯ ವೃತ್ತಿಪರತೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಐಎಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಗರುಡ’ ಜಂಟಿ ಕಸರತ್ತಿಗೆ ಸಜ್ಜು
ನವದೆಹಲಿ: ಭಾರತ ಹಾಗೂ ಫ್ರಾನ್ಸ್‌ನ ವಾಯುಪಡೆಗಳು ಜಂಟಿಯಾಗಿ ಸೇನಾ ಕಸರತ್ತು ನಡೆಸಲು ಸಜ್ಜಾಗಿವೆ. ಸೋಮವಾರದಿಂದ 12 ದಿನಗಳ ಕಾಲ ಫ್ರಾನ್ಸ್‌ನ ಮಾಂಟ್ ಡಿ ಮಾರ್ಸನ್ ಎಂಬಲ್ಲಿ ‘ಗರುಡ’ ಹೆಸರಿನಲ್ಲಿ ವಾಯುಪಡೆಗಳ ಪ್ರದರ್ಶನ ನಡೆಯಲಿದೆ.
ಮಿರಾಜ್–2000, ಸುಖೋಯ್–30ಯುದ್ಧ ವಿಮಾನಗಳು, ಫ್ರಾನ್ಸ್‌ನ ಆಲ್ಫಾ ಜೆಟ್, ಸಿ135, ಇ3ಎಫ್, ಕಾಸಾ ಮೊದಲಾದ ಯುದ್ಧವಿಮಾನಗಳು ಭಾಗಿಯಾಗಲಿವೆ. ಇಂಡೊ–ಪೆಸಿಫಿಕ್ ಸಹಕಾರದ ಭಾಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.