ನವದೆಹಲಿ/ಮುಂಬೈ: ಏರ್ ಇಂಡಿಯಾ ಕ್ಯಾಬಿನ್‌ನ ಮಹಿಳಾ ಸಿಬ್ಬಂದಿಯ ಮೇಲೆ ಈ ವಾರದ ಆರಂಭದಲ್ಲಿ ಲಂಡನ್ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹೋಟೆಲ್‌ನಲ್ಲಿ ವಿಮಾನ ಕ್ಯಾಬಿನ್ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಮೂಲವೊಂದು ಹೇಳಿದರೆ, ಇನ್ನೆರಡು ಮೂಲಗಳು ‘ಇದು ದೈಹಿಕ ಹಲ್ಲೆ’ ಎಂದು ಹೇಳಿವೆ.
ವಿಮಾನಯಾನ ಸಂಸ್ಥೆಯು ಈ ವಿಷಯವನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದು, ಕಾನೂನು ಕ್ರಮದ ಮೊರೆ ಹೋಗಿದೆ.
ಲಂಡನ್ ಹೀಥ್ರೂ ವಿಮಾನ ನಿಲ್ದಾಣದ ಸಮೀಪವಿರುವ ಪಂಚತಾರಾ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಕ್ಯಾಬಿನ್ ಸಿಬ್ಬಂದಿ ಭಾರತಕ್ಕೆ ಮರಳಿದ್ದಾರೆ ಮತ್ತು ಆಪ್ತಸಮಾಲೋಚನೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಕ್ಯಾಬಿನ್ ಸಿಬ್ಬಂದಿ ಉಳಿದುಕೊಂಡಿದ್ದ ಹೋಟೆಲ್‌ನ ಕೋಣೆಗೆ ಅನುಮತಿ ಇಲ್ಲದೆ ನುಗ್ಗಿದ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆ ನೆರವಿಗೆ ಕೂಗಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದಲ್ಲಿದ್ದ ಇತರರು ಧಾವಿಸಿ ಆಕೆಯನ್ನು ರಕ್ಷಿಸಿದರು. ಹಲ್ಲೆ ನಡೆಸಿದಾತ ಸಿಕ್ಕಿಬಿದ್ದಿದ್ದಾನೆ ಎಂದು ನಂಬಲರ್ಹ ಮೂಲಗಳು ಹೇಳಿವೆ.
‘ಹೋಟೆಲ್‌ನೊಳಗೆ ಅಕ್ರಮವಾಗಿ ನುಗ್ಗಿದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಘಟನೆಯಿಂದ ತೀವ್ರ ದುಃಖವಾಗಿದೆ. ಇದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ಪರಿಣಾಮ ಬೀರಿದೆ’ ಎಂದು ಏರ್ ಇಂಡಿಯಾದ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘ಈ ಘಟನೆಯಲ್ಲಿ ನೊಂದಿರುವ ಸಹೋದ್ಯೋಗಿಗೆ ವೃತ್ತಿಪರ ಸಮಾಲೋಚನೆ ಸೇರಿದಂತೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸಲಾಗುತ್ತಿದೆ. ನೊಂದವರ ಗೋಪ್ಯತೆಯನ್ನು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ. ಸ್ಥಳೀಯ ಪೊಲೀಸರೊಂದಿಗೆ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳುವಲ್ಲಿ ಸಂಸ್ಥೆ ನಿರತವಾಗಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಲು ಹೋಟೆಲ್ ಆಡಳಿತದ ಜತೆಗೂ ಕೆಲಸ ಮಾಡುತ್ತಿದೆ’ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.