ಕೋಯಿಕ್ಕೋಡ್: ಇಲ್ಲಿ ಶುಕ್ರವಾರ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
‘ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕರ ಪೈಕಿ ಒಬ್ಬರು ಶನಿವಾರ ಅಸುನೀಗಿದ್ದಾರೆ. ಮೃತರ ಪೈಕಿ 17 ಮಂದಿಯ ಗುರುತನ್ನು ಪತ್ತೆ ಹಚ್ಚಲಾಗಿದೆ’ ಎಂದು ಮಲಪ್ಪುರಂ ಜಿಲ್ಲಾಧಿಕಾರಿ ಕೆ.ಗೋಪಾಲಕೃಷ್ಣನ್ ಅವರು ಹೇಳಿದ್ದಾರೆ.
ದುಬೈಯಿಂದ ಬಂದ ಐಎಕ್ಸ್ 1344 ವಿಮಾನವು ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ಹೋಳಾಗಿತ್ತು. ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್ ದೀಪಕ್ ಸಾಠೆ ಹಾಗೂ ಸಹ ಪೈಲಟ್ ಅಖಿಲೇಶ್ ಕುಮಾರ್ ಸೇರಿದಂತೆ 17 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು.
‘ಘಟನೆಯ ತನಿಖೆ ನಡೆಸಲುಏರ್‌ಕ್ರಾಫ್ಟ್ ಆ್ಯಕ್ಸಿಡೆಂಡ್ ಇನ್ವೆಸ್ಟಿಗೇಷನ್ ಬ್ಯೂರೊ (ಎಎಐಬಿ) ಮತ್ತು ಡಿಜಿಸಿಎ ಆ್ಯಂಡ್ ಫ್ಲೈಟ್ ಸೇಫ್ಟಿ ಇಲಾಖೆಯ ಅಧಿಕಾರಿಗಳೂ ನಗರಕ್ಕೆ ಬಂದಿದ್ದಾರೆ’ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶನಿವಾರ ಪ್ರಕಟಣೆ ತಿಳಿಸಿದೆ.
ನಾಲ್ವರು ಸುರಕ್ಷಿತ: ವಿಮಾನದಲ್ಲಿದ್ದ (ಕ್ಯಾಬಿನ್) ನಾಲ್ಕು ಮಂದಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಶನಿವಾರ ತಿಳಿಸಿದೆ.
‘ನಾಲ್ಕು ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರೆಲ್ಲರೂ ಕೋಯಿಕ್ಕೋಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಒಕ್ಕೂಟವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.