ಕೋಯಿಕ್ಕೋಡ್: ವಿಮಾನ ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ₹10 ಲಕ್ಷ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ ₹2 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾಗಿರುವವರಿಗೆ ತಲಾ ₹50 ಸಾವಿರವನ್ನು ಮಧ್ಯಂತರ ಪರಿಹಾರ ನೀಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಅವರು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ್ದಾರೆ.ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ’ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
'ಅಪಘಾತಕ್ಕೆ ಈಡಾಗಿರುವ ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ಗಳನ್ನು ಪತ್ತೆಹಚ್ಚಿ ವಶಪಡೆಯಲಾಗಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ನಡೆಸುತ್ತಿದೆ' ಎಂದು ಸಚಿವರುತಿಳಿಸಿದ್ದಾರೆ.
ದುಬೈಯಿಂದ ಮರಳಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು (ಐಎಕ್ಸ್ 1344) ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ಹೋಳಾಗಿತ್ತು. ಶುಕ್ರವಾರ ಸಂಜೆ 7.40ಕ್ಕೆ ನಡೆದ ಅವಘಡದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.
ನಿನ್ನೆ ಸಂಜೆ ನಡೆದ ವಿಮಾನ ದುರಂತ ನಂತರದ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಮತ್ತು ಮುಂದಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಕೋಯಿಕ್ಕೋಡ್‌ಗೆ ಬಂದಿದ್ದೇನೆ. ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ವೃತ್ತಿಪರರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ ಎಂದು ಹರ್‌ದೀಪ್ ಸಿಂಗ್ ಹೇಳಿದ್ದಾರೆ.
ಕೇರಳ ಸರ್ಕಾರದ ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನೂ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚಿಸಿದ್ದಾರೆ. ರಾಜ್ಯದ ಸಚಿವ ಎ.ಸಿ.ಮೊಯಿದ್ದೀನ್ ಅವರನ್ನು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿಗೆ ನಿಯೋಜಿಸಲಾಗಿದೆ. ಪೊಲೀಸ್ ಮಹಾ ನಿರೀಕ್ಷಕರೊಬ್ಬರು ಕೂಡ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.