ADVERTISEMENT

ಸಿಬ್ಬಂದಿ ರಜೆ: ಮುಂದಿನ ದಿನಗಳಲ್ಲಿ ವಿಮಾನಗಳ ಹಾರಾಟ ಕಡಿತ; Air India

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2024, 4:40 IST
Last Updated 9 ಮೇ 2024, 4:40 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>
   

ರಾಯಿಟರ್ಸ್ ಚಿತ್ರ

ನವದೆಹಲಿ: ಅನಾರೋಗ್ಯದ ಕಾರಣ ನೀಡಿ ಕ್ಯಾಬಿನ್ ಸಿಬ್ಬಂದಿ ಏಕಾಏಕಿ ರಜೆ ಹಾಕಿರುವ ಹಿನ್ನೆಲೆಯಲ್ಲಿ 90ಕ್ಕೂ ಅಧಿಕ ದೇಶೀಯ ವಿಮಾನಗಳ ಹಾರಾಟ ವಿಳಂಬ ಮತ್ತು ರದ್ದು ಕುರಿತಂತೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಅಲೋಕ್ ಸಿಂಗ್, ಮುಂಬರುವ ದಿನಗಳಲ್ಲಿ ಸಂಸ್ಥೆಯು ವಿಮಾನಗಳ ಕಾರ್ಯಾಚರಣೆಯನ್ನು ತಗ್ಗಿಸಲಿದೆ ಎಂದು ಹೇಳಿದ್ದಾರೆ.

‘ನಿನ್ನೆ(ಮೇ.8) ಸಂಜೆಯಿಂದ ಕೆಲಸ ಆರಂಭಕ್ಕೂ ಸ್ವಲ್ಪ ಸಮಯದ ಮುನ್ನ ನಮ್ಮ ನೂರಕ್ಕೂ ಅಧಿಕ ಕ್ಯಾಬಿನ್ ಸಿಬ್ಬಂದಿ ಅನಾರೋಗ್ಯ ರಜೆ ತೆಗೆದುಕೊಂಡಿದ್ದು, ವಿಮಾನಗಳ ಕಾರ್ಯಾಚರಣೆಯಲ್ಲಿ ದೊಡ್ಡ ವ್ಯತ್ಯಯವಾಗಿದೆ. ಎಲ್‌1 ರೋಲ್‌ನ ಉದ್ಯೋಗಿಗಳು ಪ್ರಮುಖವಾಗಿ ರಜೆ ಘೋಷಿಸಿದ್ದು, ಬೇರೆ ಸಿಬ್ಬಂದಿ ಕೆಲಸಕ್ಕೆ ಹಾಜರಾದರೂ ವಿಮಾನಗಳ ಕಾರ್ಯಾಚರಣೆ ಸಾಧ್ಯವಾಗಿಲ್ಲ.’ ಎಂದು ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ADVERTISEMENT

‘ಈ ವ್ಯತ್ಯಯವು ನಮ್ಮ ವಿಮಾನ ಕಾರ್ಯಾಚರಣಾ ಜಾಲದಾದ್ಯಂತ ಆಗಿದ್ದು, ಒತ್ತಾಯಪೂರ್ವಕವಾಗಿ ಮುಂದಿನ ಕೆಲ ದಿನಗಳಿಗೆ ಶೆಡ್ಯೂಲ್ ಆಗಿರುವ ವಿಮಾನಗಳ ಸಂಚಾರ ಕಡಿತಗೊಳಿಸಬೇಕಿದೆ. ಈ ಮೂಲಕ ಕ್ಯಾಬಿನ್ ಸಿಬ್ಬಂದಿ ಕೊರತೆಯನ್ನು ನಿಭಾಯಿಸಬೇಕಿದೆ’ಎಂದೂ ಅವರು ಹೇಳಿದ್ದಾರೆ.

ಇದೇವೇಳೆ, ಸಂಕಷ್ಟದ ಸಂದರ್ಭದಲ್ಲಿ ಕಂಪನಿಯ ನಿಗದಿತ ಕೆಲಸಕ್ಕೆ ಹಾಜರಾಗಿ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಅವರು, ಧನ್ಯವಾದ ತಿಳಿಸಿದ್ದಾರೆ.

ಯಾವುದೇ ವಿಷಯದ ಕುರಿತಂತೆ ಚರ್ಚೆ ನಡೆಸುವ ಅಗತ್ಯವಿದ್ದರೆ, ನಮ್ಮ ಸ್ವಾಗತವಿದೆ ಎಂದು ಹೇಳಿದ್ದಾರೆ.

ಇದೇವೇಳೆ, ವಿಮಾನಗಳ ಸೇವೆ ವ್ಯತ್ಯಯದ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು, ಕಂಪನಿಗೆ ಸೂಚಿಸಿದೆ.

ಅಲ್ಲದೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಮಾರ್ಗಸೂಚಿ ಅನ್ವಯ ತೊಂದರೆಗೆ ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.