ಮುಂಬೈ(ಮಹಾರಾಷ್ಟ್ರ): ಮುಂಬೈ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಿಮಾನಯಾನಕ್ಕೆ ಅಡಚಣೆ ಉಂಟಾಗಿದೆ. ಕೆಲ ವಿಮಾನಗಳ ಹಾರಾಟ ರದ್ದಾಗಿದ್ದು, ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ನಡುವೆ, ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಸಂಪೂರ್ಣ ಟಿಕೆಟ್ ಮೊತ್ತವನ್ನು ರೀಫಂಡ್ ಮಾಡಲಾಗುವುದು ಅಥವಾ ಟಿಕೆಟ್ ಮರುನಿಗದಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಪ್ರಯಾಣಿಕರು ತಾವು ಪ್ರಯಾಣಿಸಬೇಕಿದ್ದ ವಿಮಾನ ರದ್ದಾಗಿದೆಯೇ? ಎಂಬುದನ್ನು ಪರಿಶೀಲಿಸಿಕೊಳ್ಳಲು ಒಂದು ಲಿಂಕ್ ಅನ್ನು ಬಿಡುಗಡೆಗೊಳಿಸಿದೆ.
'ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯು ವಿಮಾನಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಹಲವು ವಿಮಾನಗಳ ಹಾರಾಟ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಸಂಬಂಧ ಟಿಕೆಟ್ ಹಣದ ಪೂರ್ಣ ರೀಫಂಡ್ ಅಥವಾ ಒಂದು ಬಾರಿ ವಿಮಾನದ ಟಿಕೆಟ್ ಮರುನಿಗದಿಗೆ ಅವಕಾಶ ಕಲ್ಪಿಸಲಾಗಿದೆ’ಎಂದು ಏರ್ ಇಂಡಿಯಾ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದೆ.
ಈ ಹಿಂದೆಯೂ ವಿಮಾನಗಳ ಹಾರಾಟ ರದ್ದು ಮಾಡುವ ಕುರಿತಂತೆ ವಿಮಾನಯಾನ ಸಂಸ್ಥೆ ಎಚ್ಚರಿಕೆ ನೀಡಿತ್ತು.
ಭಾರಿ ಮಳೆ ಹಿನ್ನೆಲೆ ಹವಾಮಾನ ಇಲಾಖೆಯು ಮುಂಬೈ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ನಗರದ ಎಲ್ಲ ಶಾಲೆ ಮತ್ಯು ಕಾಲೇಜುಗಳಿಗೆ ಬೃಹನ್ ಮುಂಬೈ ಮಹಾನಗರಪಾಲಿಕೆಯು ರಜೆ ಘೋಷಿಸಿದೆ.
ಮುಂಬೈನ ಹಲವು ಪ್ರದೇಶಗಳಲ್ಲಿ 100 ಮಿ/ಮೀಗೂ ಅಧಿಕ ಮಳೆ ಆಗಿದೆ. ಅಂಧೇರಿಯ ಮಲ್ಪ ಡೊಂಗ್ರಿ ಪ್ರದೇಶದಲ್ಲಿ ದಾಖಲೆಯ 155 ಮಿ.ಮೀ ಮಳೆ ಆಗಿದೆ. ಪಾಸ್‌ಪೊಲಿಯಲ್ಲಿ 155 ಮಿ.ಮೀ ಮಳೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.