ADVERTISEMENT

3 ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: ತುರ್ತು ಭೂಸ್ಪರ್ಶ

ವಿಳಂಬವಾಗಿ ಸಂಚರಿಸಿದ 2 ಇಂಡಿಗೋ ವಿಮಾನಗಳು

ಪಿಟಿಐ
Published 14 ಅಕ್ಟೋಬರ್ 2024, 16:25 IST
Last Updated 14 ಅಕ್ಟೋಬರ್ 2024, 16:25 IST
ಇಂಡಿಗೋ ವಿಮಾನ ( ಸಾಂದರ್ಭಿಕ ಚಿತ್ರ)
ಇಂಡಿಗೋ ವಿಮಾನ ( ಸಾಂದರ್ಭಿಕ ಚಿತ್ರ)   

ನವದೆಹಲಿ: ಮುಂಬೈನಿಂದ ಹೊರಡಬೇಕಿದ್ದ ಮೂರು ಅಂತರರಾಷ್ಟ್ರೀಯ ವಿಮಾನಗಳಿಗೆ ಸೋಮವಾರ ಹುಸಿ ಬಾಂಬ್‌ ಬೆದರಿಕೆ ಬಂದಿತ್ತು. ಅದರಲ್ಲಿ ನ್ಯೂಯಾರ್ಕ್‌ಗೆ ಸಂಚರಿಸಬೇಕಿದ್ದ ಏರ್‌ ಇಂಡಿಯಾ ವಿಮಾನವು ನವದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

‘ಭದ್ರತಾ ತಪಾಸಣೆಯನ್ನು ನಡೆಸಲಾಗಿದ್ದು, ವಿಮಾನಗಳೊಳಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

‘239 ಪ್ರಯಾಣಿಕರಿದ್ದ ‘ಏರ್‌ಇಂಡಿಯಾ–119‘ ವಿಮಾನವು ಸೋಮವಾರ ನ್ಯೂಯಾರ್ಕ್‌ಗೆ ಹೊರಟಿತ್ತು. ಆದರೆ ಭದ್ರತಾ ಸಮಿತಿಯ ಸೂಚನೆಯಂತೆ ವಿಮಾನವನ್ನು ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಬೇಕಾಯಿತು’ ಎಂದು ಏರ್‌ ಇಂಡಿಯಾ ಪ್ರಕಟಣೆ ತಿಳಿಸಿದೆ.

ADVERTISEMENT

‘ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಯಿತು. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಜನರನ್ನು ತಪಾಸಣೆಗೆ ಒಳಪಡಿಸಲಾಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್‌ಇಂಡಿಯಾ ವಿಮಾನವು ಮಂಗಳವಾರ ಬೆಳಿಗ್ಗೆ ಮತ್ತೆ ನ್ಯೂಯಾರ್ಕ್‌ನತ್ತ ಪ್ರಯಾಣ ಬೆಳೆಸಲಿದೆ. 

ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ಸಹ ಹಲವು ಗಂಟೆ ವಿಳಂಬವಾಗಿ ಪ್ರಯಾಣ ಆರಂಭಿಸಿದವು.

ಇಂಡಿಗೋ ಸಂಸ್ಥೆಯ ವಿಮಾನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಿ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಭಾನುವಾರ ರಾತ್ರಿ 2 ಗಂಟೆಗೆ ಹೊರಡಬೇಕಿದ್ದ ಮುಂಬೈ– ಮಸ್ಕತ್‌ ವಿಮಾನವು 7 ಗಂಟೆ ವಿಳಂಬವಾಗಿ ಸಂಚಾರ ಆರಂಭಿಸಿತು. ಮುಂಬೈ–ಜೆದ್ದಾ ವಿಮಾನವು 10 ಗಂಟೆ ವಿಳಂಬವಾಗಿ ಹೊರಟಿತು. 

* ತುರ್ತು ಭೂಸ್ಪರ್ಶಕ್ಕೆ ಭದ್ರತಾ ಸಮಿತಿ ಸೂಚನೆ * ‘ಎಕ್ಸ್’  ಮೂಲಕ ಬಂದಿದ್ದ ಬೆದರಿಕೆ ಸಂದೇಶ * ಇಂದು ಬೆಳಿಗ್ಗೆ ನ್ಯೂಯಾರ್ಕ್‌ನತ್ತ ವಿಮಾನ ಹಾರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.