ನವದೆಹಲಿ: ದೆಹಲಿಯಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಗುರುವಾರ ರಾತ್ರಿ ರಷ್ಯಾದ ಕೆಜೆಎ ವಿಮಾನ ನಿಲ್ದಾಣದಲ್ಲಿ (Krasnoyarsk International Airport) ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನದಲ್ಲಿದ್ದ ಎಲ್ಲ 225 ಪ್ರಯಾಣಿಕರು ಹಾಗೂ 19 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.
ತೊಂದರೆಯಲ್ಲಿ ಸಿಲುಕಿರುವ ತನ್ನ ಪ್ರಯಾಣಿಕರು, ಸಿಬ್ಬಂದಿಯ ರಕ್ಷಣೆಗೆ ಏರ್ ಇಂಡಿಯಾ ಇಂದು ರಷ್ಯಾಕ್ಕೆ ಮತ್ತೊಂದು ವಿಮಾನವನ್ನು ಕಳುಹಿಸಿದೆ. ವಿಮಾನದಲ್ಲಿ ವೈದ್ಯರು, ಆಹಾರ ಸೇರಿದಂತೆ ಅಗತ್ಯ ತುರ್ತು ಸೌಲಭ್ಯಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಏರ್ ಇಂಡಿಯಾ ಇಂದು ಎಕ್ಸ್ ತಾಣದಲ್ಲಿ ತಿಳಿಸಿದೆ.
ಗುರುವಾರ ದೆಹಲಿಯಿಂದ ಹೊರಟಿದ್ದ ‘ಎಐ 183’ ವಿಮಾನದ ಕಾಕ್‌ಪಿಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರಿಂದ ಪೈಲಟ್ ವಿಮಾನವನ್ನು ಕೆಜಿಎ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು.
ಸದ್ಯ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಕೆಜೆಎ ವಿಮಾನ ನಿಲ್ದಾಣದ ಕಟ್ಟಡದಲ್ಲಿ ಉಳಿದುಕೊಳ್ಳಲು ಹಾಗೂ ಆಹಾರ, ಔಷಧಿ ವ್ಯವಸ್ಥೆ ಮಾಡಲಾಗಿದೆ. ಅವರ ಸಂಬಂಧಿಕರು ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿಷಯ ತಿಳಿದು ಕೂಡಲೇ ಮಾಸ್ಕೊದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಕೆಜೆಎ ವಿಮಾನನಿಲ್ದಾಣಕ್ಕೆ ತೆರಳಿದ್ದಾರೆ. ಕೆಲ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಹೊರಗಿನ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿ ಕೊಟ್ಟಿದ್ದಾರೆ ಎಂದು ತಿಳಿಸಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಭಾರತದಿಂದ ಹೊರಟಿರುವ ವಿಮಾನ ಶುಕ್ರವಾರ ರಾತ್ರಿ 8 ಗಂಟೆಗೆ ಕೆಜೆಎ ವಿಮಾನ ನಿಲ್ದಾಣ ತಲುಪಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.