ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತಮ್ಮ ಪೈಲಟ್ ಸೇರಿ ಇತರ ಸಿಬ್ಬಂದಿಗೆ ಹೊಸ ವಿನ್ಯಾಸದ ಸಮವಸ್ತ್ರವನ್ನು ಪರಿಚಯಿಸಿದೆ.
ವಿಮಾನಯಾನ ಸಂಸ್ಥೆಯು ತನ್ನ 10,000 ಕ್ಕೂ ಹೆಚ್ಚು ಪೈಲಟ್, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಕೆಂಪು, ನೇರಳೆ ಮತ್ತು ಬಂಗಾರ ಬಣ್ಣದ ಬಟ್ಟೆಯನ್ನು ಸಮವಸ್ತ್ರವನ್ನಾಗಿ ನೀಡುತ್ತಿದೆ. ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಸಮವಸ್ತ್ರವನ್ನು ವಿನ್ಯಾಸಗೊಳಿಸಿದ್ದಾರೆ.
ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಉಡುಪುಗಳು ಭಾರತೀಯ ಪರಂಪರೆಯ ವಾಸ್ತುಶೈಲಿಯನ್ನು (ಜರೋಖಾ) ಮತ್ತು ವಿಸ್ಟಾವನ್ನು (ಹೊಸ ಏರ್ ಇಂಡಿಯಾ ಲೋಗೋ ಐಕಾನ್) ನೆನಪಿಸುವ ಮಾದರಿಯಲ್ಲಿರಲಿದೆ.
‘ನಮ್ಮ ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಗೆ ಹೊಸವರ್ಷಕ್ಕೆ ಹೊಸ ಸಮವಸ್ತ್ರಗಳನ್ನು ಪರಿಚಯಿಸುತ್ತಿದ್ದೇವೆ. ಈ ಸಮವಸ್ತ್ರವು ಏರ್ ಇಂಡಿಯಾದ ಶ್ರೀಮಂತ ಇತಿಹಾಸದ ಸಂಕೇತ ಮತ್ತು ಉಜ್ವಲ ಭವಿಷ್ಯದ ಭರವಸೆ. ಭಾರತದ ಪ್ರಮುಖ ವಸ್ತ್ರ ವಿನ್ಯಾಸಕಾರ ಮನೀಶ್ ಮಲ್ಹೋತ್ರಾ ಅವರು ರೂಪಿಸಿದ ಈ ಸಮವಸ್ತ್ರಗಳು ಮೂರು ಸರ್ವೋತ್ಕೃಷ್ಟ ಭಾರತೀಯ ಬಣ್ಣಗಳನ್ನು ಒಳಗೊಂಡಿವೆ. ಕೆಂಪು, ನೇರಳೆ ಮತ್ತು ಬಂಗಾರ ಬಣ್ಣಗಳ ಸಮವಸ್ತ್ರಗಳು ಆತ್ಮವಿಶ್ವಾಸ, ನವ ಭಾರತವನ್ನು ಪ್ರತಿನಿಧಿಸುತ್ತದೆ’ ಎಂದು ಏರ್‌ಲೈನ್ಸ್ ಹೇಳಿದೆ.
ಸಿಬ್ಬಂದಿ ಹೊಸ ಸಮವಸ್ತ್ರ ಧರಿಸಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.