ADVERTISEMENT

ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಏರ್‌ ಇಂಡಿಯಾಗೆ ₹30 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 21:33 IST
Last Updated 20 ಜನವರಿ 2023, 21:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಸಹಪ್ರಯಾಣಿಕನೊಬ್ಬ ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಮಾನಯಾನ ಸಂಸ್ಥೆಗೆ ಡಿಜಿಸಿಎ ಶುಕ್ರವಾರ ₹ 30 ಲಕ್ಷ ದಂಡ ವಿಧಿಸಿದೆ. ಪೈಲಟ್‌ನ ಪರವಾನಗಿಯನ್ನು ಮೂರು ತಿಂಗಳು ಕಾಲ ಅಮಾನತು ಮಾಡಿದೆ.

ಅಲ್ಲದೇ, ‘ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಕ್ಕಾಗಿ’ ಏರ್‌ ಇಂಡಿಯಾದ ನಿರ್ದೇಶಕಿಗೆ (ವಿಮಾನದಲ್ಲಿ ಸೇವೆಗಳು) ₹ 3 ಲಕ್ಷ ದಂಡ ವಿಧಿಸಲಾಗಿದೆ.

ಪ್ರಯಾಣಿಕನ ಅನುಚಿತ ವರ್ತನೆಗಾಗಿ ವಿಮಾನಯಾನ ಸಂಸ್ಥೆಯೊಂದಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಇದೇ ಮೊದಲ ಬಾರಿಗೆ ದಂಡ ವಿಧಿಸಿದೆ.

ADVERTISEMENT

ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಕಳೆದ ವರ್ಷ ನವೆಂಬರ್‌ 26ರಂದು ಈ ಘಟನೆ ನಡೆದಿತ್ತು. ಈ ಕುರಿತು ವಿಮಾನಯಾನ ಸಂಸ್ಥೆಯು ಡಿಜಿಸಿಎಗೆ ಜ.4ರಂದು ವರದಿ ಸಲ್ಲಿಸಿತ್ತು. ಏರ್‌ಇಂಡಿಯಾ ಸಲ್ಲಿಸಿದ ಲಿಖಿತ ಉತ್ತರವನ್ನು ಪರಿಶೀಲಿಸಿದ ನಂತರ ಡಿಜಿಸಿಎ, ಈ ಕ್ರಮ ಕೈಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಏರ್‌ ಇಂಡಿಯಾ ವಕ್ತಾರ, ‘ನಮ್ಮಿಂದ ಆಗಿರುವ ನ್ಯೂನತೆಗಳನ್ನು ಒಪ್ಪಿಕೊಳ್ಳುತ್ತೇವೆ’ ಎಂದಿದ್ದಾರೆ.

‘ವಿಮಾನದಲ್ಲಿ ಕಂಡುಬರುವ ಪ್ರಯಾಣಿಕರ ಅನುಚಿತ ವರ್ತನೆಯಂತಹ ಸಂದರ್ಭಗಳನ್ನು ನಿಭಾಯಿಸುವುದು ಸೇರಿದಂತೆ ಚಾಲ್ತಿಯಲ್ಲಿರುವ ನೀತಿ–ನಿಯಮಗಳ ಪಾಲನೆ ಕುರಿತು ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣದ ಆರೋಪಿ ಶಂಕರ್‌ ಮಿಶ್ರಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂಸ್ಥೆಯ ವಿಮಾನದಲ್ಲಿ ಮಿಶ್ರಾ ಅವರು ಪ್ರಯಾಣಿಸದಂತೆ ಏರ್‌ ಇಂಡಿಯಾ ನಾಲ್ಕು ತಿಂಗಳ ಕಾಲ ನಿಷೇಧ ಹೇರಿದೆ.

ಡಿಜಿಸಿಎ ಕ್ರಮ: ಮಿಶ್ರ ಪ್ರತಿಕ್ರಿಯೆ
ಏರ್ ಇಂಡಿಯಾಕ್ಕೆ ದಂಡ ವಿಧಿಸಿ, ಪೈಲಟ್‌ನ ಪರವಾನಗಿಯನ್ನು ಅಮಾನತುಗೊಳಿಸಿರುವ ಡಿಜಿಸಿಎ ಕ್ರಮಕ್ಕೆ ವಿಮಾನಯಾನ ಉದ್ಯಮ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಸುರಕ್ಷತೆಯನ್ನು ಖಾತರಿಪಡಿಸುವುದು ಡಿಜಿಸಿಎ ಕೆಲಸ. ಅದಕ್ಕೆ ದಂಡ ವಿಧಿಸಲು ಅಧಿಕಾರ ಇದೆಯೇ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಈ ಪ್ರಕರಣದಲ್ಲಿ ‘ಅಕೌಂಟೆಬಲ್ ಮ್ಯಾನೇಜರ್‌’ ಶಿಕ್ಷೆಯಿಂದ ಪಾರಾಗಿದ್ದು ಸರಿಯಲ್ಲ ಎಂದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಾರ್ಟಿನ್ ಕನ್ಸಲ್ಟಿಂಗ್‌ನ ಸಿಇಒ ಮಾರ್ಕ್‌ ಡಿ ಮಾರ್ಟಿನ್, ‘ಡಿಜಿಸಿಎ ಗಂಭೀರವಾಗಿ ನಡೆದುಕೊಳ್ಳಬೇಕು. ಇಎಎಸ್‌ಎ ಮತ್ತು ಎಫ್‌ಎಎ ರೀತಿಯಲ್ಲಿ ವಿಮಾನ ಯಾನ ಸುರಕ್ಷತೆಯನ್ನು ನಿಯಂತ್ರಿಸುವ ವಿಷಯದಲ್ಲಿ ಪ್ರಬುದ್ಧತೆ ಪ್ರದರ್ಶಿಸಬೇಕು’ ಎಂದರು.

ಇಂಡಿಗೊದ ಮಾಜಿ ಉಪಾಧ್ಯಕ್ಷ ಕ್ಯಾಪ್ಟನ್ ಶಕ್ತಿ ಲಂಬಾ, ‘ಏರ್‌ ಇಂಡಿಯಾದ ಪೈಲಟ್‌ ಇನ್‌ ಕಮಾಂಡ್‌, ನಿರ್ದೇಶಕಿ ಹಾಗೂ ವಿಮಾನ ಸಂಸ್ಥೆ ವಿರುದ್ಧ ಔಪಚಾರಿಕವಾಗಿ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ ‘ಅಕೌಂಟೆಬಲ್ ಮ್ಯಾನೇಜರ್’ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದರು. ‘ಈ ಘಟನೆಯಿಂದ ಟಾಟಾ ಅವರ ಖ್ಯಾತಿ ಹಾಗೂ ವೃತ್ತಿಪರತೆಗೆ ಧಕ್ಕೆಯುಂಟಾಗಿದೆ. ಹೀಗಾಗಿ ಉನ್ನತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗಬೇಕು’ ಎಂದು ಕ್ಯಾಪ್ಟನ್‌ ಲುಂಬಾ ಪ್ರತಿಪಾದಿಸಿದರು.

ಬ್ರ್ಯಾಂಡ್‌ ತಂತ್ರಗಾರ ಹಾಗೂ ಹರೀಶ್‌ ಬಿಜೂರ್ ಕನ್ಸಲ್ಟ್ಸ್‌ನ ಸಂಸ್ಥಾಪಕ ಹರೀಶ್‌ ಬಿಜೂರ್‌, ‘ದಂಡ ವಿಧಿಸಿದ್ದು ಸಂಸ್ಥೆಯ ಬ್ರ್ಯಾಂಡ್‌ಗೆ ಬಲವಾದ ಏಟು ನೀಡಿದಂತಾಗಿದೆ. ದಂಡದ ಮೊತ್ತವು ಘಟನೆಯ ಗಂಭೀರತೆಯನ್ನು ತೋರಿಸುತ್ತದೆ’ ಎಂದು ಹೇಳಿದರು. ‘ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿ, ಮೂತ್ರ ವಿಸರ್ಜಿಸಿದ ವ್ಯಕ್ತಿಗೆ ಶಿಕ್ಷೆಯಾಗಬಹುದು. ಆದರೆ, ವಿಮಾನಯಾನ ಸಂಸ್ಥೆಯ ನಿಜವಾದ ಅಪರಾಧಿ. ಈ ವಿಷಯದಲ್ಲಿ ಡಿಜಿಸಿಎ ಕೈಗೊಂಡ ಕ್ರಮ ಸರಿಯಾಗಿದ್ದು, ಉತ್ತಮ ನಿದರ್ಶನವನ್ನು ತೋರಿಸಿಕೊಟ್ಟಿದೆ’ ಎಂದು ಅಕ್ಯುಮೆನ್‌ ಏವಿಯೇಷನ್‌ ಚೇರಮನ್‌ ಹಾಗೂ ಸಿಇಒ ಅಲೋಕ್‌ ಆನಂದ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.