ನವದೆಹಲಿ: ಚಳಿಗಾಲ ಆರಂಭ ಆಗುತ್ತಿದ್ದಂತೆಯೇ ‘ಮಂಜಿ’ನೊಂದಿಗೆ ಹೊಗೆಯನ್ನೂ ಒಳಗೊಂಡ ‘ಹೊಂಜು’ ಆವರಿಸಿದ್ದರಿಂದ ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್)ದಲ್ಲಿನ ವಾಯು ಮಾಲಿನ್ಯ ಪ್ರಮಾಣ ತೀವ್ರವಾಗಿ ಹೆಚ್ಚಿದೆ.
ದೀಪಾವಳಿಯ ಪಟಾಕಿಗಳ ಹಾವಳಿಯಿಂದಾಗಿ ಗಾಳಿಯ ಗುಣಮಟ್ಟತೀವ್ರವಾಗಿ ಕುಸಿದಿದೆ. ಇಂಥ ವಾತಾವರಣದಿಂದಾಗಿ ಎನ್‌ಸಿಆರ್ ವ್ಯಾಪ್ತಿಯ ದೆಹಲಿ, ನವದೆಹಲಿ, ಗಾಜಿಯಾಬಾದ್, ನೊಯ್ಡಾ, ಗ್ರೇಟರ್ ನೊಯ್ಡಾ, ಗುರುಗ್ರಾಮ, ಫರೀದಾಬಾದ್ ಮತ್ತಿತರ ಕಡೆ ಉಸಿರಾಟವೇ ಕಷ್ಟಕರ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯ ಮಾಹಿತಿಯ ಪ್ರಕಾರ 50ರಿಂದ 100ರಷ್ಟು ಇರಬೇಕಿರುವ ವಾಯು ಗುಣಮಟ್ಟ ಸೂಚ್ಯಂಕವು (ಏರ್ ಕ್ವಾಲಿಟಿ ಇಂಡೆಕ್ಸ್) ನಗರದ ಕೆಲವೆಡೆ 450ರ ಗಡಿ ತಲುಪಿದೆ.
ವಾಯು ಗುಣಮಟ್ಟ ಸೂಚ್ಯಂಕವು 50ರ ಒಳಗಿದ್ದರೆ ಅದನ್ನು ಉತ್ತಮ ಮತ್ತು ಜೀವಿಸಲು ಅನುಕೂಲಕರ ವಾತಾವರಣ ಎನ್ನಲಾಗುತ್ತದೆ. ಈ ಪ್ರಮಾಣ 100 ಅಥವಾ 150 ನ್ನು ದಾಟಿದರೆ ಅಂತಹ ವಾತಾವರಣದಲ್ಲಿ ಬದುಕು ದುಸ್ತರ. ಸೂಚ್ಯಂಕವು ಈ ಪ್ರಮಾಣಕ್ಕಿಂತಲ್ಲೂ ಹೆಚ್ಚಾದರೆ ಶ್ವಾಸಕೋಶದ ತೊಂದರೆ ಅಥವಾ ಕ್ಯಾನ್ಸರ್ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಲಿವೆ.
ದೆಹಲಿಯ ಗಡಿಗೆ ಅಂಟಿಕೊಂಡಿರುವ ಪಂಜಾಬ್, ಹರಿಯಾಣ ಮತ್ತು ರಾಜಸ್ತಾನದ ವಿವಿಧ ಭಾಗಗಳ ರೈತರು ಗೋಧಿ ಕಟಾವು ಪೂರ್ಣಗೊಳಿಸಿ ಒಣ ಹುಲ್ಲನ್ನು ಸುಡುತ್ತಿರುವುದೂ ಇಲ್ಲಿನ ವಾಯು ಮಾಲಿನ್ಯ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ. ದೇಶದಲ್ಲೇ ಅತಿ ಕೆಟ್ಟ ವಾತಾವರಣ ಇರುವ ಹಾಗೂ ಅತ್ಯಂತ ಕಡಿಮೆ ಆಮ್ಲಜನಕ ಲಭ್ಯವಿರುವ ನಗರ ಎಂಬ ಕುಖ್ಯಾತಿಗೆ ರಾಜಧಾನಿ ಒಳಗಾಗಿದೆ.
ಎನ್‌ಸಿಆರ್ ವ್ಯಾಪ್ತಿಯೆಲ್ಲೆಡೆ ದಟ್ಟ ಹೊಂಜು ಆವರಿಸಿಕೊಂಡಿದ್ದು,ಮಧ್ಯಾಹ್ನವಾದರೂ ಸೂರ್ಯನ ದರ್ಶನವಾಗದ ವಾತಾವರಣ ನಿರ್ಮಾಣವಾಗಿದೆ. ಉಸಿರಾಟಕ್ಕೆ ಶುದ್ಧ ಗಾಳಿಯೇ ದೊರೆಯದೆ ಏದುಸಿರು ಬಿಡುವ ದುಃಸ್ಥಿತಿ ಎದುರಾಗಿದೆ.
ನಿಷೇಧವಿದ್ದರೂ ಹಾವಳಿ:ದೀಪಾವಳಿ ವೇಳೆ ಪಟಾಕಿ ಮಾರಾಟನಿಷೇಧಿಸಿ 2017ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರಿಂದ ಪಟಾಕಿ ಸುಡುವ ಪ್ರಮಾಣ ಶೇ 80ರಷ್ಟು ಕಡಿಮೆಯಾಗಿದೆ. ಆದರೂ, ದೀಪಾವಳಿ ದಿನ ಪಟಾಕಿ ಸುಟ್ಟಿದ್ದರಿಂದ ಹಬ್ಬದ ಮಾರನೇ ದಿನ ವಾಯು ಮಾಲಿನ್ಯ ಪ್ರಮಾಣ ಹೆಚ್ಚಿರುವುದು ಆತಂಕಕ್ಕೆ ಕಾರಣವಾಗಿದೆ.
‘2017ಕ್ಕೆ ಮೊದಲು ದೀಪಾವಳಿಯ ಮಾರನೇ ದಿನದ ಮಾಲಿನ್ಯ ಪ್ರಮಾಣಕ್ಕೆ ಹೋಲಿಸಿದರೆ ಈಗಿನ ಪ್ರಮಾಣ ಅತ್ಯಂತ ಕಡಿಮೆ. ಪಟಾಕಿ ನಿಷೇಧಿಸಿದ್ದರಿಂದ ಸುಧಾರಣೆ ಕಂಡುಬಂದಿದೆ ಎಂಬುದು ಸಮಾಧಾನಕರ ಸಂಗತಿಯಾದರೂ ನೆಮ್ಮದಿಯ ನಿಟ್ಟಿಸಿರು ಬಿಡುವಂಥ ಬೆಳವಣಿಗೆಯೇನು ಅಲ್ಲ’ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
‘ದೀಪಾವಳಿಯ ಮುನ್ನಾದಿನ ದೆಹಲಿ ಹಾಗೂ ಸುತ್ತಮುತ್ತ ದಾಖಲಾಗಿದ್ದ ಗರಿಷ್ಠ ವಾಯು ಗುಣಮಟ್ಟ ಸೂಚ್ಯಂಕ 362. ಆದರೆ, ಗಾಜಿಯಾಬಾದ್, ನೊಯ್ಡಾ, ಗ್ರೇಟರ್ ನೊಯ್ಡಾ ಹಾಗೂ ಪಾಣಿಪತ್‌ಗಳಲ್ಲಿ ದೀಪಾವಳಿಯ ಮಾರನೇ ದಿನ ಅದು 446ಕ್ಕೆ ತಲುಪಿದೆ’
‘ಹೃದಯ ಕಾಯಿಲೆ, ಅಸ್ತಮಾ ಇರುವವರು, 16 ವರ್ಷಕ್ಕಿಂತ ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಈ ವಾತಾವರಣವು ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸದಿರುವುದೇ ಲೇಸು’ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಗಾಳಿಯ ಚಲನೆ ಪ್ರಮಾಣ ಕಡಿಮೆ
‘ಚಳಿಗಾಲದ ಆರಂಭವಾದ್ದರಿಂದ ಗಾಳಿಯ ಚಲನೆಯೂ ಕುಂಠಿತಗೊಂಡಿದೆ. ಇದೂ ಮಾಲಿನ್ಯದ ಸಮಸ್ಯೆಗೆ ಮತ್ತೊಂದು ಕಾರಣ. ಪಟಾಕಿ ಹೊಡೆದ ದಿನ ತೀವ್ರ ಗಾಳಿ ಬೀಸಿದ್ದರೆ, ದೀಪಾವಳಿ ನಂತರದ ಮಾಲಿನ್ಯ ಪ್ರಮಾಣ ಕಡಿಮೆಯೇ ಇರುತ್ತಿತ್ತು. ಕಳೆದ ವರ್ಷ ದೀಪಾವಳಿ ಆಚರಣೆಯ ದಿನಕ್ಕೆ ಹೋಲಿಸಿದರೆ ಈ ವರ್ಷ ಗಾಳಿಯ ಚಲನೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ವಾತಾವರಣದಲ್ಲಿ ಮಾಲಿನ್ಯಕಾರಕ ಕಣಗಳು ಸೇರಿಕೊಂಡಿವೆ’ ಎನ್ನುತ್ತಾರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಪ್ರಯೋಗಾಲಯದ ಮುಖ್ಯಸ್ಥ ವಿ.ಕೆ. ಶುಕ್ಲಾ.
‘ಚಳಿಗಾಲದ ಆರಂಭವಾದ್ದರಿಂದ ಗಾಳಿಯ ಚಲನೆಯೂ ಕುಂಠಿತಗೊಂಡಿದೆ. ಇದೂ ಮಾಲಿನ್ಯದ ಸಮಸ್ಯೆಗೆ ಮತ್ತೊಂದು ಕಾರಣ. ಪಟಾಕಿ ಹೊಡೆದ ದಿನ ತೀವ್ರ ಗಾಳಿ ಬೀಸಿದ್ದರೆ, ದೀಪಾವಳಿ ನಂತರದ ಮಾಲಿನ್ಯ ಪ್ರಮಾಣ ಕಡಿಮೆಯೇ ಇರುತ್ತಿತ್ತು. ಕಳೆದ ವರ್ಷ ದೀಪಾವಳಿ ಆಚರಣೆಯ ದಿನಕ್ಕೆ ಹೋಲಿಸಿದರೆ ಈ ವರ್ಷ ಗಾಳಿಯ ಚಲನೆಯ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ವಾತಾವರಣದಲ್ಲಿ ಮಾಲಿನ್ಯಕಾರಕ ಕಣಗಳು ಸೇರಿಕೊಂಡಿವೆ’
–ವಿ.ಕೆ. ಶುಕ್ಲಾ, ಮುಖ್ಯಸ್ಥರು,
ವಾಯು ಗುಣಮಟ್ಟ ಪ್ರಯೋಗಾಲಯ,
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.