ನವದೆಹಲಿ: ಏರ್‌ಸೆಲ್-ಮ್ಯಾಕ್ಸಿಸ್ ಹಗರಣ ಸಂಬಂಧ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪಟಿಯಾಲ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಆರೋಪಪಟ್ಟಿ ಸಲ್ಲಿಸಿದೆ.
ಚಿದಂಬರಂ ಅವರನ್ನು ಮೊದಲನೇ ಆರೋಪಿ ಎಂದು ಹೆಸರಿಸಲಾಗಿದೆ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ, ಕಾರ್ತಿ ಅವರ ಅಕೌಂಟೆಂಟ್ ಭಾಸ್ಕರ್ ರಾಮನ್ ಸೇರದಂತೆ ಒಟ್ಟು 9 ಆರೋಪಿಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.
₹3500 ಕೋಟಿ ಮೊತ್ತದ ಹಗರಣ ಇದಾಗಿದೆ. ಈ ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು. ಈ ಹಿಂದೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2006ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ವೇಳೆ ಚಿದಂಬರಂ ಅವರು ವಿದೇಶಿ ಕಂಪನಿಗೆ 'ವಿದೇಶಿ ಹೂಡಿಕೆ ಪ್ರಚಾರ ಮಂಡಳಿ'ಯ (ಎಫ್‌ಐಪಿಬಿ) ಮಂಜೂರಾತಿ ನೀಡಿದ್ದು ಹೇಗೆ ಎಂಬ ಕುರಿತು ಸಿಬಿಐ ತನಿಖೆ ನಡೆಸಿತ್ತು. ಮ್ಯಾಕ್ಸಿಸ್‌ನ ಅಂಗಸಂಸ್ಥೆ ಮಾರಿಷಸ್ ಮೂಲದ ಗ್ಲೋಬಲ್ ಕಮ್ಯುನಿಕೇಷನ್ ಸರ್ವೀಸಸ್ ಹೋಲ್ಡಿಂಗ್ಸ್‌ಗೆ ಮಂಜೂರಾತಿ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.