ADVERTISEMENT

ಪಿ.ಚಿದಂಬರಂ ಪ್ರಕರಣ: ಸಮ್ಮತಿ ಪತ್ರ ಪಡೆದುಕೊಳ್ಳಲು ಫೆ.26ರವರೆಗೆ ಗಡುವು

ಪಿಟಿಐ
Published 2 ಫೆಬ್ರುವರಿ 2021, 11:20 IST
Last Updated 2 ಫೆಬ್ರುವರಿ 2021, 11:20 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ವಿರುದ್ಧ ಏರ್‌ಸೆಲ್‌ –ಮ್ಯಾಕ್ಸಿಸ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಬ್ರಿಟನ್‌ ಮತ್ತು ಇತರೆ ಮೂರು ದೇಶಗಳ ಕೋರ್ಟ್‌ಗಳಿಂದ ಸಮ್ಮತಿ ಪತ್ರ (ಎಲ್.ಆರ್) ಪಡೆದುಕೊಳ್ಳಲು ದೆಹಲಿ ಹೈಕೋರ್ಟ್ ಸೋಮವಾರ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐಗೆ ಫೆಬ್ರುವರಿ 26ರವರೆಗೂ ಕಾಲಾವಕಾಶ ನೀಡಿತು.

ಬ್ರಿಟನ್ ಅಲ್ಲದೆ, ಸಿಂಗಪುರ, ಮಲೇಷ್ಯಾ ಮತ್ತು ಮಾರಿಷಸ್‌ನ ಕೋರ್ಟ್‌ಗಳಿಗೆ ಎಲ್‌.ಆರ್. ನೀಡುವಂತೆ ಮನವಿ ಸಲ್ಲಿಸಲಾಗಿದೆ. ಇನ್ನೂ ಪ್ರತಿಕ್ರಿಯೆ ದೊರೆತಿಲ್ಲ ಎಂದು ತನಿಖಾ ಸಂಸ್ಥೆಗಳು ವಿಶೇಷ ನ್ಯಾಯಾಧೀಶರಾದ ಎಂ.ಕೆ.ನಾಗಪಾಲ್ ಅವರಿಗೆ ಮಾಹಿತಿ ನೀಡಿದವು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಸೋನಿಯಾ ಮಾಥೂರ್ ಅವರು, ಜನವರಿ 7,2021ರಂದೇ ನೆನಪೋಲೆ ಕಳುಹಿಸಿದ್ದರೂ ಇನ್ನೂ ಪತ್ರ ಬಂದಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಫೆ. 26ಕ್ಕೆ ಮುಂದೂಡಿದರು.

ADVERTISEMENT

ನ್ಯಾಯಾಂಗ ನೆರವು ಕೋರಿ ವಿದೇಶಿ ಕೋರ್ಟ್‌ಗಳಿಗೆ ಅಧಿಕೃತವಾಗಿ ಸಲ್ಲಿಸುವ ಪತ್ರಗಳಿಗೆ ಎಲ್‌.ಆರ್ (ಲೆಟರ್ ರೊಗೆಟರಿ) ಎನ್ನಲಾಗುತ್ತದೆ. ಪ್ರಕರಣದ ವಿಚಾರಣೆ ವೇಳೆ ಡಿಸೆಂಬರ್ 2ರಂದು ನ್ಯಾಯಾಲಯವು, ವಿಚಾರಣೆ ವಿಳಂಬವಾಗುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.