ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್(48) ಅವರನ್ನು ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಸುಮಾರು ಆರು ತಾಸು ವಿಚಾರಣೆಗೆ ಒಳಪಡಿಸಲಾಗಿದೆ. 2016ರ ಪನಾಮಾ ದಾಖಲೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ವಿಚಾರಣೆ ಹಾಜರಾಗಿದ್ದರು.
ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರ ಸೊಸೆ ಐಶ್ವರ್ಯಾ ರೈ ಅವರನ್ನು ಸುಮಾರು 6 ಗಂಟೆ ಪ್ರಶ್ನಿಸಲಾಗಿದೆ. ಇತ್ತೀಚೆಗಷ್ಟೇ ಐಶ್ವರ್ಯಾ ಅವರ ಪತಿ ಅಭಿಶೇಕ್ ಬಚ್ಚನ್ ಅವರನ್ನು ಮತ್ತೊಂದು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.
ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಐಶ್ವರ್ಯಾ ರೈ ಅವರ ಹೇಳಿಕೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿಕೊಂಡಿದೆ. ಸತತ 6 ತಾಸು ವಿಚಾರಣೆ ಎದುರಿಸಿ ಸಂಜೆ 7 ಗಂಟೆಗೆ ಅವರು ಇಡಿ ಕಚೇರಿಯ ಹಿಂದಿನ ಬಾಗಿಲಿನಿಂದ ಹೊರಬಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಕೆಲವು ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ವರದಿಯಾಗಿದೆ.
ಬಚ್ಚನ್ ಕುಟುಂಬದವರು ಸೇರಿದಂತೆ ಭಾರತಕ್ಕೆ ಸಂಬಂಧಿಸಿದ ಒಟ್ಟು 426 ಪ್ರಕರಣಗಳು ಸೋರಿಕೆಯಾಗಿದ್ದವು. 2016–17ರಿಂದ ಇಡಿ ಅವುಗಳ ಕುರಿತು ತನಿಖೆ ಕೈಗೊಂಡಿದೆ.
ವಿದೇಶದ ಕಂಪನಿಗಳಲ್ಲಿ ಹಣ ತೊಡಗಿಸಿರುವ ನಾಯಕರು ಹಾಗೂ ಖ್ಯಾತನಾಮರ ಹೆಸರನ್ನು ವಾಷಿಂಗ್ಟನ್ ಮೂಲದ ಅಂತರರಾಷ್ಟ್ರೀಯ ಪತ್ರಕರ್ತರ ತನಿಖಾ ಒಕ್ಕೂಟವು 2016ರಲ್ಲಿ ಬಹಿರಂಗಪಡಿಸಿತ್ತು. ಈ ಪೈಕಿ ಕೆಲವರು ವಿದೇಶದ ಬ್ಯಾಂಕ್‌ಗಳಲ್ಲಿ ಖಾತೆಗಳನ್ನೂ ತೆರೆದಿದ್ದಾರೆ. ಭಾರತದ ಜೊತೆ ನಂಟಿರುವ 426 ಪ್ರಕರಣಗಳನ್ನು ಹೆಸರಿಸಲಾಗಿತ್ತು. ಬಚ್ಚನ್ ಕುಟುಂಬಕ್ಕೆ ತಳಕು ಹಾಕಿಕೊಂಡಿರುವ ಪ್ರಕರಣವನ್ನು 2016–17ರಿಂದ ತನಿಖೆ ನಡೆಸಲಾಗುತ್ತಿದೆ.
2005ರಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‌ನ ವಿದೇಶಿ ಕಂಪನಿಗೆ ಸಂಬಂಧಿಸಿ ಐಶ್ವರ್ಯಾ ಅವರ ಹೆಸರು ಕೇಳಿಬಂದಿದ್ದು, ಈ ಸಂಸ್ಥೆಯು 2008ರಲ್ಲಿ ವಿಸರ್ಜನೆಯಾಯಿತು ಎಂದು ಹೇಳಲಾಗಿದೆ. ವಿದೇಶಿ ಕಂಪನಿಯೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಐಶ್ವರ್ಯಾ ಅವರ ಪತಿ ಅಭಿಷೇಕ್ ಬಚ್ಚನ್ ಅವರನ್ನು ವಿಚಾರಣೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.