ಜೈಪುರ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಕಾಂಗ್ರೆಸ್ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ಧೊಟಾಸರಾ ಅವರ ಇಬ್ಬರೂ ಮಕ್ಕಳಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳನ್ನು ಉದ್ದೇಶಿಸಿ ಸುದ್ದಿ ಸಂಸ್ಥೆ ಎಎನ್‌ಐ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಧೊಟಾಸರಾ ಅವರ ಮಗ ಅಭಿಲಾಶ್ ಅವರಿಗೆ ನವೆಂಬರ್ 7ರಂದು ಮತ್ತು ಮತ್ತೊಬ್ಬ ಮಗ ಅವಿನಾಶ್ ಅವರಿಗೆ ನವೆಂಬರ್ 8ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸೂಚಿಸಿದೆ ಎಂದು ವರದಿ ತಿಳಿಸಿದೆ.
ಕಳೆದ ವಾರ, ಜೈಪುರ ಮತ್ತು ಸಿಕರ್‌ನಲ್ಲಿರುವ ಧೊಟಾಸರಾ ಅವರಿಗೆ ಸೇರಿದ ಸ್ಥಳಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದರು.
ಈ ತಿಂಗಳಲ್ಲಿ ರಾಜಸ್ಥಾನದ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈ ನಡುವೆಯೇ ಈ ದಾಳಿ ನಡೆದಿದ್ದನ್ನು ಕಾಂಗ್ರೆಸ್ ಖಂಡಿಸಿತ್ತು. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು, ಇ.ಡಿಯನ್ನು ಪಾಕಿಸ್ತಾನದಿಂದ ಬಂದು ನಮ್ಮ ಬೆಳೆಯನ್ನು ತಿನ್ನುವ ಮಿಡತೆ ಸಮೂಹಕ್ಕೆ ಹೋಲಿಸಿದ್ದರು.
ಧೊಟಾಸರಾ ಅವರಿಗೆ ಸೇರಿದ ಸ್ಥಳಗಳ ಜೊತೆಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಪಕ್ಷೇತರ ಶಾಸಕ ಓಂ ಪ್ರಕಾಶ್ ಹುಡ್ಲಾ ಮನೆ ಮೇಲೂ ದಾಳಿ ನಡೆಸಿತ್ತು.
ದಾಳಿ ಬಳಿಕ ಪ್ರತಿಕ್ರಿಯಿಸಿದ್ದ ಧೊಟಾಸರಾ, ಇ.ಡಿ ಅಧಿಕಾರಿಗಳು ನನ್ನ ಬಳಿ ಒಂದು ಪ್ರಶ್ನೆಯನ್ನೂ ಕೇಳಿಲ್ಲ ಮತ್ತು ಹೇಳಿಕೆಯನ್ನೂ ಪಡೆಯಲಿಲ್ಲ ಎಂದು ಹೇಳಿದ್ದರು. ಯಾವುದೇ ಹಣ ಮತ್ತು ದಾಖಲೆಗಳನ್ನು ಜಪ್ತಿ ಮಾಡಿಲ್ಲ. ನನ್ನ ಮತ್ತು ನನ್ನ ಮಕ್ಕಳ ಫೋನ್‌ಗಳು ಹಾಗೂ ಪೆನ್ ಡ್ರೈವ್ ಕೊಂಡೊಯ್ದರು ಎಂದು ಹೇಳಿದ್ದರು.
ನನ್ನ ಮಗ, ವೃತ್ತಿಯಲ್ಲಿ ಅಕೌಂಟೆಂಟ್ ಆಗಿರುವ ಅವಿನಾಶ್ ದೋತಸ್ರಾ ಹೆಸರಿನಲ್ಲಿ ವಾರೆಂಟ್ ತಂದಿದ್ದರು. ನನ್ನ ಇಬ್ಬರೂ ಮಕ್ಕಳ ಮನೆಗಳನ್ನೂ ಅವರು ಶೋಧಿಸಿದರು ಎಂದು ಹೇಳಿದ್ದರು.
ಇ.ಡಿ ದಾಳಿ ನಡೆಸಿರುವ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಆರೋಪವಿರುವ ಕಲಾಮ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಜನರು ನಮ್ಮ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ, ಸಂಸ್ಥೆಯ ವ್ಯವಹಾರಕ್ಕು ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.