ನವದೆಹಲಿ: ಹೈಕಮಾಂಡ್ ವಿರುದ್ಧ ಮುನಿಸಿಕೊಂಡು ಕಳೆದ ಗುರುವಾರ ಪಕ್ಷ ತೊರೆದಿದ್ದ ಹರಿಯಾಣದ ಕಾಂಗ್ರೆಸ್ ನಾಯಕ, ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಮುಖ್ಯಸ್ಥ ಅಜಯ್ ಯಾದವ್ ಅವರು ಎರಡೇ ದಿನದಲ್ಲಿ ಕಾಂಗ್ರೆಸ್‌ಗೆ ಮರಳಿದ್ದಾರೆ.
‘ನನ್ನ ಕೆಲಸವನ್ನು ಹೈಕಮಾಂಡ್ ಗುರುತಿಸುತ್ತಿಲ್ಲ. ಜೊತೆಗೆ, ನನ್ನ ಬಗ್ಗೆ ಬಹಳ ಕಠೋರ ಮಾತುಗಳನ್ನೂ ಆಡಿತು’ ಎಂದು ದೂರಿದ್ದ ಯಾದವ್ ಅವರು ರಾಜೀನಾಮೆ ನೀಡಿದ್ದರು. ಶನಿವಾರ ರಾತ್ರಿ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಹಳೆಯದನ್ನು ಮರೆಯುವಂತೆ ನನ್ನ ಮಗ (ಕಾಂಗ್ರೆಸ್‌ನ ಚಿರಂಜೀವಿ ರಾವ್) ತಿಳಿಹೇಳಿದ’ ಎನ್ನುವ ಮೂಲಕ ಮತ್ತೊಮ್ಮೆ ಪಕ್ಷ ಸೇರಿರುವುದಾಗಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೇಲೆ ಪಕ್ಷವು ತಮ್ಮನ್ನು ಅಗೌರವದಿಂದ ನಡೆಸಿಕೊಳ್ಳುತ್ತಿತ್ತು ಎಂದೂ ದೂರಿದ್ದರು. ಮಾಜಿ ಮುಖ್ಯಮಂತ್ರಿ ಭೂಪೆಂದರ್ ಹೂಡಾ ಅವರ ವಿರೋಧಿಗಳಲ್ಲಿ ಯಾದವ್ ಪ್ರಮುಖರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಗುರುಗ್ರಾಮ ಕ್ಷೇತ್ರದಿಂದ ಯಾದವ್ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಹೂಡಾ ಅವರು ನನ್ನನ್ನು ಕಡೆಗಣಿಸಿದ್ದಾರೆ ಎಂದೂ ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.