ADVERTISEMENT

ಸೂರ್ಯಾಘಾತ: ನ್ಯಾಯಾಂಗ ತನಿಖೆಗೆ ಒಪ್ಪಿಸಲು ಅಜಿತ್‌ ಪವಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 16:24 IST
Last Updated 20 ಏಪ್ರಿಲ್ 2023, 16:24 IST
ಅಜಿತ್‌ ಪವಾರ್‌
ಅಜಿತ್‌ ಪವಾರ್‌   

ಮುಂಬೈ: ಮಹಾರಾಷ್ಟ್ರದ ಖಾರ್‌ಘರ್‌ ಆಯೋಜಿಸಲಾಗಿದ್ದ ‘ಮಹಾರಾಷ್ಟ್ರ ಭೂಷಣ ಪ್ರಶಸ್ತಿ’ ಪ್ರಧಾನ ಸಮಾರಂಭದ ವೇಳೆ ಸೂರ್ಯಾಘಾತದಿಂದಾಗಿ ಜನರು ಮೃತಪಟ್ಟ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಎನ್‌ಸಿಪಿ ನಾಯಕ, ರಾಜ್ಯ ವಿಧಾನಸಭೆಯ ವಿರೋಧಪಕ್ಷದ ನಾಯಕ ಅಜಿತ್‌ ಪವಾರ್‌ ಅವರು ಗುರುವಾರ ಆಗ್ರಹಿಸಿದ್ದಾರೆ.

14 ಜನರು ಸಾವಿಗೀಡಾದ ಘಟನೆ ಕುರಿತು ತನಿಖೆ ನಡೆಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ನಿತಿನ್‌ ಕೀರ್‌ ನೇತೃತ್ವದ ಏಕಸದಸ್ಯ ಸಮಿತಿಯನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಸರ್ಕಾರ ನೇಮಕ ಮಾಡಿದೆ. ಈ ಬೆನ್ನಲ್ಲೇ, ನಿವೃತ್ತ ನ್ಯಾಯಮೂರ್ತಿಯಿಂದ ಘಟನೆಯ ತನಿಖೆ ನಡೆಸುವಂತೆ ಪವಾರ್‌ ಅವರು ಮಹಾರಾಷ್ಟ್ರ ರಾಜ್ಯಪಾಲ ರಮೇಶ್‌ ಬೈಸ್‌ ಅವರಿಗೆ ಮನವಿ ಪತ್ರ ಬರೆದಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ. ಅದಕ್ಕಾಗಿ ಸರ್ಕಾರದ ವಿರುದ್ಧ ‘ಉದ್ದೇಶಪೂರ್ವಕ ಹತ್ಯೆ’ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಹೇಳಿದ್ದಾರೆ.

ಸಾವಿನ ಸಂಖ್ಯೆ 14ಕ್ಕಿಂತಲೂ ಹೆಚ್ಚೇ ಇದೆ. ಆದರೆ ಅಧಿಕಾರಿಗಳು ಈ ವಿಚಾರದಲ್ಲಿ ತುಟಿ ಬಿಚ್ಚುತ್ತಿಲ್ಲ. ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರವು ತಲಾ ₹20 ಲಕ್ಷ ಪರಿಹಾರ ನೀಡಬೇಕು. ಅಸ್ವಸ್ಥರಾದವರಿಗೆ ಉಚಿತ ಚಿಕಿತ್ಸೆ ನೀಡಬೇಕು ಮತ್ತು ತಲಾ ₹5 ಲಕ್ಷ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.

ADVERTISEMENT

ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ತಡೆಯುವ ಸಲುವಾಗಿ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ರೂಪಿಸಲು ತಜ್ಞರ ಸಮಿತಿಯನ್ನು ನೇಮಿಸಬೇಕು ಎಂದು ಕೂಡ ಅವರು ಆಗ್ರಹಿಸಿದ್ದಾರೆ.

50 ಜನ ಮಡಿದಿರುವ ಅಂದಾಜಿದೆ: ರಾವುತ್‌

ಖಾರ್‌ಘರ್‌ ದುರಂತದಲ್ಲಿ 50ರಿಂದ 75 ಜನರು ಮಡಿದಿರುವ ಅಂದಾಜಿದೆ. ಸರ್ಕಾರವು ನಿಜ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದು ಶಿವಸೇನಾ (ಉದ್ಧವ್‌ ಬಾಳಾಠಾಕ್ರೆ) ನಾಯಕ ಸಂಜಯ್‌ ರಾವುತ್‌ ಅವರು ಆರೋಪಿಸಿದ್ದಾರೆ.

ರಾಯಗಢ ಜಿಲ್ಲೆಯ ಉರಣ್‌, ಶ್ರೀವರ್ಧನ್‌, ರೋಹಾ ಮತ್ತು ಮಾಂಗಾವ್‌ ತಾಲೂಕುಗಳಲ್ಲಿಯ ತಮ್ಮ ಪಕ್ಷದ ಕಾರ್ಯಕರ್ತರ ಈ ಕುರಿತು ಜೊತೆ ಚರ್ಚಿಸಿದ್ದೇವೆ. ಸರ್ಕಾರ ನೀಡಿರುವ ಅಂಕಿಅಂಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ ಎಂದು ಸುದ್ದಿಗಾರರ ಎದುರು ಹೇಳಿದರು.

ರಾಯಗಢ ಜಿಲ್ಲೆಯ ಎಲ್ಲಾ ಹಳ್ಳಿಗಳ ನಿವಾಸಿಗಳ ಅಂಕಿಅಂಶಗಳನ್ನು ತೆಗೆದುಕೊಂಡೆರೆ ಕನಿಷ್ಠ 50 ಜನರು ಮೃತಪಟ್ಟಿರುವುದು ತಿಳಿದುಬರುತ್ತದೆ. ಆದರೆ ಶಿಂದೆ ನೇತೃತ್ವದ ಸರ್ಕಾರದ ಜನರು ಸಂತ್ರಸ್ತರ ಮನೆಗಳಿಗೆ ತೆರಳಿ, ಅವರ ಕುಟುಂಬ ಸದಸ್ಯರ ಧ್ವನಿ ಅಡಗಿಸಿದ್ದಾರೆ. ಇದು ದುಷ್ಟ ಸರ್ಕಾರ. ಅಧಿಕಾರದಲ್ಲಿ ಮುಂದುವರೆಯಲು ಇದಕ್ಕೆ ಯಾವ ಹಕ್ಕೂ ಇಲ್ಲ. ಕೂಡಲೇ ಸರ್ಕಾರ ಪದತ್ಯಾಗ ಮಾಡಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.