ಬಾರಾಮತಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ಭದ್ರಕೋಟೆ ಎನಿಸಿರುವ ಬಾರಾಮತಿಯಿಂದ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಭಾನುವಾರ ಆರಂಭಿಸಿದರು.
‘ಮಹಾಯುತಿ’ ಸರ್ಕಾರವು ಮಹಿಳೆಯರಿಗೆ ನೀಡಿರುವ ಆರ್ಥಿಕ ನೆರವು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿ ಅವರು ಮತಯಾಚಿಸಿದರು. ಸಂವಿಧಾನದ ಬಗ್ಗೆ ವಿರೋಧ ಪಕ್ಷಗಳು ಹರಡುವ ಸುಳ್ಳಿನ ಬಗ್ಗೆ ಎಚ್ಚರದಿಂದಿರಿ ಎಂದು ಮತದಾರರಿಗೆ ಮನವಿ ಮಾಡಿದರು.
‘ಮುಂಬರುವ ಚುನಾವಣೆಯಲ್ಲಿ (ಡಿಸೆಂಬರ್‌ನಲ್ಲಿ ನಡೆಯಲಿರುವ) ಕೆಲವರು ಸುಳ್ಳು ನಿರೂಪಣೆಗಳನ್ನು ನಿಮ್ಮ ಮುಂದಿಡುವರು. ನಾವು ಜೀವಂತವಿರುವವರೆಗೆ ಯಾರಿಗೂ ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ₹1,500 ಗೌರವಧನ ನೀಡಲು ಈಚೆಗೆ ಆರಂಭಿಸಿರುವ ‘ಲಡ್ಕೀ ಬಹೀನ್’ ಯೋಜನೆಯನ್ನು ಅವರು ಉಲ್ಲೇಖಿಸಿದರು.
‘ಮಹಿಳೆಯರು, ರೈತರು ಮತ್ತು ಬಡವರ ಏಳಿಗೆಗಾಗಿ ಅಧಿಕಾರವನ್ನು ಮೀಸಲಿಡಬೇಕು ಎಂದು ನಾನು ನಂಬಿದ್ದೇನೆ. ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿಯೇ ನಮ್ಮ ಪಕ್ಷದ ಪ್ರಮುಖ ಕಾರ್ಯಸೂಚಿ ಆಗಿದೆ. ಆದರೆ ವಿರೋಧ ಪಕ್ಷದವರು ಸುಳ್ಳು ನಿರೂಪಣೆಗಳನ್ನು ಹರಡುವುದರತ್ತ ಗಮನ ಕೇಂದ್ರೀಕರಿಸಿದ್ದಾರೆ’ ಎಂದು ಟೀಕಿಸಿದರು.
ಅಜಿತ್ ಪವಾರ್ ಅವರು ಚುನಾವಣಾ ರಣಕಹಳೆ ಮೊಳಗಿಸಲು ಬಾರಾಮತಿಯನ್ನೇ ಆಯ್ಕೆ ಮಾಡಿರುವುದು ಗಮನಾರ್ಹವಾಗಿದೆ. ಏಕೆಂದರೆ, ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರು ಎನ್‌ಸಿಪಿ (ಎಸ್‌ಪಿ) ಅಭ್ಯರ್ಥಿ ಸುಪ್ರಿಯಾ ಸುಳೆ (ಶರದ್ ಪವಾರ್ ಪುತ್ರಿ) ಎದುರು ಪರಾಭವಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.