ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ನಡುವಣಅಧಿಕಾರ ಹಂಚಿಕೆ ಹಗ್ಗಜಗ್ಗಾಟ ಸದ್ಯಕ್ಕೆ ಬಗೆಹರಿಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಶಿವಸೇನೆಯುತನ್ನಮುಖವಾಣಿ ‘ಸಾಮ್ನಾ’ದಲ್ಲಿ ಎನ್‌ಸಿಪಿ, ಕಾಂಗ್ರೆಸ್ ಮತ್ತು ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸುವ ವಿಚಾರ ಹರಿಬಿಟ್ಟ ನಂತರ ಅಲ್ಲಿನ ರಾಜಕಾರಣ ದೇಶದ ಗಮನ ಸೆಳೆಯಿತು. ಇದೀಗ ಎನ್‌ಸಿಪಿಗೆ ಸಂದೇಶ ರವಾನಿಸಿರುವ ಶಿವಸೇನೆ ಮತ್ತೊಮ್ಮೆ ದೊಡ್ಡಸದ್ದು ಮಾಡಿದೆ.
ಎನ್‌ಸಿಪಿ ನಾಯಕ ಮತ್ತು ಶರದ್ ಪವಾರ್ ಅವರ ಸಂಬಂಧಿಅಜಿತ್ ಪವಾರ್ ಅವರಿಗೆ ಶಿವಸೇನೆಯ ನಾಯಕ ಸಂಜಯ್ ರಾವುತ್ ಭಾನುವಾರ ಮೆಸೇಜ್ ಕಳಿಸಿದ್ದಾರೆ. ಈ ವಿಷಯವನ್ನು ಸ್ವತಃ ಅಜಿತ್ ಪವಾರ್ ಮಾಧ್ಯಮಗಳ ಎದುರು ಬಹಿರಂಗಪಡಿಸಿದ್ದಾರೆ.
ರಾವುತ್ ಕಳಿಸಿರುವ ಮೆಸೇಜ್‌ನಲ್ಲಿ‘Namaskar mi Sanjay Raut. Jai Maharashtra’ (ನಮಸ್ಕಾರ, ನಾನು ಸಂಜಯ್ ರಾವುತ್, ಜೈ ಮಹಾರಾಷ್ಟ್ರ) ಎಂಬ ಪದಗಳಿವೆ.
‘ಇದೇ ಮೊದಲ ಬಾರಿಗೆ ಅವರು ಮೆಸೇಜ್ ಮಾಡಿದ್ದಾರೆ. ಮೆಸೇಜ್ ಬಂದಾಗ ನಾನೊಂದು ಸಭೆಯಲ್ಲಿದ್ದೆ. ಸಂಜಯ್ ಅವರಿಗೆ ಖಂಡಿತ ವಾಪಸ್ ಕರೆ ಮಾಡಿ ಮಾತಾಡ್ತೀನಿ’ ಎಂದು ಅಜಿತ್ ಪವಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ನವದೆಹಲಿಯಲ್ಲಿಸೋಮವಾರ ಶರದ್ ಪವಾರ್–ಸೋನಿಯಾ ಗಾಂಧಿ ಭೇಟಿ ನಡೆಯಲಿದೆ. ಈ ಭೇಟಿಗೆ ಕೇವಲ ಒಂದು ದಿನ ಮೊದಲು ಸಂಭವಿಸಿರುವ ಈ ಮಹತ್ವದ ಬೆಳವಣಿಗೆ ಕೇವಲ ಅಚಾನಕ್ ಎನ್ನಲು ಸಾಧ್ಯವಿಲ್ಲ. ಸರ್ಕಾರ ರಚನೆ ಕುರಿತಂತೆ ತರಹೇವಾರಿ ಲೆಕ್ಕಾಚಾರಗಳು ಚಾಲ್ತಿಗೆ ಬಂದಿವೆ.
ಇದನ್ನೂ ಓದಿ:ಎನ್‌ಸಿಪಿ, ಕಾಂಗ್ರೆಸ್ ಪರ ಒಲವು ತೋರಿದ ಶಿವಸೇನೆ
ಮುಖ ತಿರುಗಿಸಿಕೊಂಡ ನಾಯಕರು
‘ಶಿವಸೇನೆಗೆ ಮುಖ್ಯಮಂತ್ರಿ ಗಾದಿ ಬಿಟ್ಟುಕೊಡುತ್ತೇವೆ ಎಂದು ಬಿಜೆಪಿ ಹೇಳಿಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಫಡಣವೀಸ್ ಕಳೆದ ಮಂಗಳವಾರಹೇಳಿದ್ದರು. ಅಂದಿನಿಂದ ಇಂದಿನವರೆಗೂ ಬಿಜೆಪಿ–ಶಿವಸೇನೆ ನಾಯಕರು ಮುಖ ತಿರುಗಿಸಿಕೊಂಡಿದ್ದಾರೆ. ಸರ್ಕಾರದಲ್ಲಿ ಸಾಧ್ಯವಾದಷ್ಟೂ ಹೆಚ್ಚಿನ ಪ್ರಾತಿನಿಧ್ಯ ದಕ್ಕಿಸಿಕೊಳ್ಳಬೇಕು ಎಂದು ಶಿವಸೇನೆ ಹಟಕ್ಕೆ ಬಿದ್ದಿದೆ.
‘ಮುಖ್ಯಮಂತ್ರಿ ಹುದ್ದೆ ನಮಗೆ ಸಿಗಲೇಬೇಕು’ ಎನ್ನುತ್ತಿರುವ ಶಿವಸೇನೆಯ ನಾಯಕ ಸಂಜಯ್ ರಾವುತ್, ‘ಅದಕ್ಕಿಂತ ಕಡಿಮೆಯಾದ್ದು ಏನು ಸಿಕ್ಕರೂ ನಮಗೆ ಬೇಡ’ ಎನ್ನುವ ಮಾತನ್ನೇ ಪುನರುಚ್ಚರಿಸುತ್ತಿರುವುದು ಮಹಾರಾಷ್ಟ್ರದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಸ್ಥಿತಿ ರೂಪುಗೊಳ್ಳಲು ಕಾರಣವಾಗಿದೆ.
ಮೈತ್ರಿ ಮುರಿಯುವ ಎಚ್ಚರಿಕೆ
‘ದುರಹಂಕಾರದ ಕೆಸರಿನಲ್ಲಿ ಸಿಲುಕಿದೆ ಸರ್ಕಾರದ ತೇರು’ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ನಾಯಕ ಸಂಜಯ್ರಾವುತ್, ‘ಬಿಜೆಪಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ನಾವು ಸ್ವತಂತ್ರವಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದರು.
‘ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆಎರಡನೇ ದೊಡ್ಡಪಕ್ಷವಾಗಿರುವ ಶಿವಸೇನೆ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದೆ. ಎನ್‌ಸಿಪಿ, ಕಾಂಗ್ರೆಸ್ ಮತ್ತು ಪಕ್ಷೇತರರ ಬೆಂಬಲದೊಂದಿಗೆ ನಮ್ಮ ಸಂಖ್ಯಾಬಲ 170 ದಾಟುತ್ತದೆ’ ಎಂದು ರಾವುತ್ ಹೇಳಿದ್ದರು.
ಇದು ಹೇಗೆ ಸಾಧ್ಯ?
ರಾವುತ್ ಲೆಕ್ಕಾಚಾರದಂತೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಶಿವಸೇನೆ ನಿರ್ಧರಿಸಿದರೆ ಅದಕ್ಕೆ 170 ಸದಸ್ಯರ ಬೆಂಬಲ ಸಿಗಲಿದೆ. ಆದರೆ ಶರದ್‌ಪವಾರ್ ಹೇಳುವಂತೆ ಇದು ಅಸಾಧ್ಯ. ಕಾಂಗ್ರೆಸ್ ಮತ್ತು ಎನ್‌ಸಿಪಿ ಸೇರಿದರೆ ಆಗುವುದು ಕೇವಲ 110 (44+54) ಮಾತ್ರ.
ಒಟ್ಟು 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿದ್ದರೆ ಇತರರು 29 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಸರ್ಕಾರ ರಚನೆಗೆ 145 ಸದಸ್ಯ ಬಲ ಬೇಕು.
ಶರದ್ ಪವಾರ್ ಗುಪ್ತಸಭೆ
ಮುಂಬೈನಲ್ಲಿ ಶನಿವಾರ ಶರದ್ ಪವಾರ್ ತಮ್ಮ ಪಕ್ಷದ ಆಪ್ತ ನಾಯಕರ ಜೊತೆಗೆ ಗುಪ್ತ ಸಭೆ ನಡೆಸಿರುವುದು ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿತ್ತು.
‘ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡಿಎಂದು ನಮಗೆ ಜನರು ನಮಗೆ ಹೇಳಿದ್ದಾರೆ. ನಾವು ಹಾಗೆಯೇ ಇರುತ್ತೇವೆ’ ಎಂದು ಶರದ್ ಪವಾರ್ ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿಹೇಳಿದ್ದರು. ಆದರೆ ಈಗ ‘ಮುಖ್ಯಮಂತ್ರಿ ಸ್ಥಾನವನ್ನು ಶಿವಸೇನೆ ಕೇಳುವುದರಲ್ಲಿ ತಪ್ಪಿಲ್ಲ. ಅವರು ಹೇಗೆ ಬಹುಮತದ ಲೆಕ್ಕಾಚಾರ ಹಾಕುತ್ತಿದ್ದಾರೋ ಗೊತ್ತಿಲ್ಲ’ ಎಂದೆಲ್ಲಾ ಹೊಸ ಮಾತು ಆಡುತ್ತಿದ್ದಾರೆ.
ಇದೀಗ ಶರದ್ ಪವಾರ್ ಸಹ ಮನಸ್ಸು ಬದಲಿಸಿದ್ದು, ಶಿವಸೇನೆಯ ಜೊತೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೆ ಮಾತುಕತೆಗೆ ಮುಂದಾಗಲು ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಎನ್‌ಸಿಪಿಯ ಒಳವಲಯದಲ್ಲಿಕೇಳಿಬರುತ್ತಿವೆ.
ಶಿವಸೇನೆಯೊಂದಿಗೆ ಕಾಂಗ್ರೆಸ್‌ಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದರಿಂದ ಕಾಂಗ್ರೆಸ್ ಸರ್ಕಾರದ ಭಾಗವಾಗುವುದಿಲ್ಲ. ಆದರೆ ಹೊರಗಿನಿಂದ ಬೆಂಬಲಿಸುತ್ತದೆ. ಸೋನಿಯಾಗಾಂಧಿ ಅವರನ್ನು ಸೋಮವಾರ ಭೇಟಿಯಾದಾಗ ಈ ಸೂತ್ರವನ್ನು ಮುಂದಿಟ್ಟು, ಅವರ ಒಪ್ಪಿಗೆ ಪಡೆಯಲು ಶರದ್ ಪವಾರ್ ಯೋಚಿಸಿದ್ದಾರೆ ಎನ್ನಲಾಗುತ್ತಿದೆ.
ಬಿಜೆಪಿ ದೂರ ಇಡೋಣ: ಕಾಂಗ್ರೆಸ್
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು,‘ಎನ್‌ಸಿಪಿ ಜೊತೆಗೆ ಶಿವಸೇನೆ ಸರ್ಕಾರ ರಚಿಸಲು ಮುಂದಾದರೆ ನಾವು ಬೆಂಬಲಿಸೋಣ. ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಪ್ರಯತ್ನಿಸೋಣ’ ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ವರದಿ ಮಾಡಿದೆ.
‘ಸರ್ಕಾರ ರಚನೆ ಸಾಧ್ಯತೆ ಬಗ್ಗೆ ನೀವು ಯೋಚಿಸಿ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ’ ಎಂದುರಾಜ್ಯದ ಕಾಂಗ್ರೆಸ್ ನಾಯಕರು ಶರದ್ ಪವಾರ್ ಅವರನ್ನು ಭೇಟಿಯಾಗಿ ಭರವಸೆ ಕೊಟ್ಟಿದ್ದಾರೆ ಎಂದು ಎನ್‌ಸಿಪಿ ಮೂಲಗಳು ಹೇಳಿವೆ.
‘ನಿಮ್ಮ ಪಕ್ಷದ ಹೈಕಮಾಂಡ್ ಅನುಮತಿ ಪಡೆದುಕೊಳ್ಳಿಎಂದು ಶರದ್ ಪವಾರ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ. ಬಿಜೆಪಿಯೇತರ ಸರ್ಕಾರ ರಚನೆ ಸಾಧ್ಯತೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಬಿಜೆಪಿಯೊಂದಿಗಿನ ಮೈತ್ರಿಯನ್ನು ಉದ್ಧವ್ ಠಾಕ್ರೆ ಕಡಿದುಕೊಂಡರೆ ಮಾತ್ರ ಪರ್ಯಾಯ ಸರ್ಕಾರದ ಸಾಧ್ಯತೆ ನಿಚ್ಚಳವಾಗುತ್ತದೆ. ನಾವಂತೂ ಎಲ್ಲ ಬೆಳವಣಿಗೆಗಳಿಗೂ ಮುಕ್ತರಾಗಿದ್ದೇವೆ’ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ನವೆಂಬರ್ 7ರ ಒಳಗೆ ಬಿಜೆಪಿ ಸರ್ಕಾರ?
ನೆರೆ ಸಂತ್ರಸ್ತರ ಭೇಟಿಗೆಂದು ವಿದರ್ಭಕ್ಕೆ ದೇವೇಂದ್ರ ಫಡಣವೀಸ್ ಮತ್ತು ಮರಾಠವಾಡಕ್ಕೆ ಉದ್ಧವ್ ಠಾಕ್ರೆ ಹೋಗಿದ್ದಾರೆ. ಅವರಿಬ್ಬರೂ ಮುಂಬೈಗೆ ಬಂದ ನಂತರ ಇಬ್ಬರ ನಡುವೆ ಅನೌಪಚಾರಿಕಮಾತುಕತೆ ಆರಂಭವಾಗುತ್ತೆ. ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ. ಎಂದು ಬಿಜೆಪಿ ಹೇಳುತ್ತಿದೆ.
ಶರದ್ ಪವಾರ್ ಅವರನ್ನು ನಂಬಿ ಉದ್ಧವ್ ಠಾಕ್ರೆ ಅಲ್ಪಮತದ ಸರ್ಕಾರ ರಚನೆಗೆ ಮುಂದಾಗುವುದು ಅನುಮಾನ ಎನ್ನುವುದು ಬಿಜೆಪಿ ನಾಯಕರ ನಿರೀಕ್ಷೆ.
‘ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆಯಾಗುವುದು, ಎನ್‌ಸಿಪಿ–ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಅಸಾಧ್ಯದ ಸಂಗತಿ. ಸೈದ್ಧಾಂತಿಕವಾಗಿ ಈ ಪಕ್ಷಗಳ ನಡುವೆ ಹೊಂದಾಣಿಕೆ ಸಾಧ್ಯವೇ ಇಲ್ಲ. ಇನ್ನೊಂದು ವಾರದಲ್ಲಿ ಹಿಂದುತ್ವ ಪ್ರತಿಪಾದಿಸುವ ಸರ್ಕಾರವೇ ಮುಂಬೈ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲಿದೆ ಎಂದು ಶನಿವಾರ ಬಿಜೆಪಿ ನಾಯಕ ಸುಧೀರ್ ಮುಂಗುಟಿವಾರ್ ಹೇಳಿದ್ದಾರೆ.
‘ಶಿವಸೇನೆಯವರು ಹೇಳುತ್ತಿರುವಂತೆ ನಾವು ರಾಷ್ಟ್ರಪತಿ ಆಡಳಿತದ ವಿಚಾರ ಪ್ರಸ್ತಾಪಿಸಿ ಹೊಸ ಶಾಸಕರನ್ನು ಹೆದರಿಸಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.‘ನವೆಂಬರ್ 8ರ ನಂತರವೂ ರಾಜ್ಯದಲ್ಲಿ ಅಸ್ಥಿರತೆ ಮುಂದುವರಿದರೆ ಏನಾಗುತ್ತೆ’ ಎಂಬ ಮಾಧ್ಯಮ ಪ್ರತಿನಿಧಿಯೊಬ್ಬರ ಪ್ರಶ್ನೆಗೆ ನಾನು ಹಾಗೆ ಪ್ರತಿಕ್ರಿಯಿಸಿದ್ದೆ ಅಷ್ಟೇ. ಮಹಾರಾಷ್ಟ್ರದಲ್ಲಿ ಮುಂದಿನ ಸರ್ಕಾರವನ್ನು ಬಿಜೆಪಿಯೇ ರಚಿಸಲಿದೆ’ ಎಂದು ಮುಂಗುಟಿವಾರ್ ಸೇರಿದಂತೆ ಹಲವು ನಾಯಕರು ಆಶಾವಾದದ ಮಾತುಗಳನ್ನು ಆಡುತ್ತಿದ್ದಾರೆ.
ಇದನ್ನೂ ಓದಿ: ಸಂಪಾದಕೀಯ | ಪಕ್ಷಗಳಿಗೆ ಪಾಠ ಕಲಿಸಿದ ಮತದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.