ಮಾಲ್ವಾನ್: ಭಾರಿ ಚರ್ಚೆಗೆ ಕಾರಣವಾದ ಮಹಾರಾಷ್ಟ್ರದ ರಾಜ್‌ಕೋಟ್ ಕೋಟೆಯಲ್ಲಿ ಸ್ಥಾಪಿಸಲಾಗಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಿದ್ದ ಸ್ಥಳದಲ್ಲೇ ಮಹಾರಾಜರ ಭವ್ಯ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಭರವಸೆ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಹೆಮ್ಮೆ ಹಾಗೂ ಆತ್ಮ ಸಮ್ಮಾನ. ಶೀಘ್ರದಲ್ಲಿ ಅವರ ಭವ್ಯವಾದ ಪ್ರತಿಮೆಯನ್ನು, ಅದೇ ಸ್ಥಳದಲ್ಲಿ ಸ್ಥಾಪಿಸಲಾಗುವುದು. ಇದು ನನ್ನ ವಾಗ್ದಾನ’ ಎಂದಿದ್ದಾರೆ.
ಮಹಾರಾಷ್ಟ್ರದ ಕರಾವಳಿ ಪ್ರದೇಶವಾದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ಪ್ರದೇಶದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಲಾಗಿತ್ತು. ಪ್ರತಿಮೆ ಉರುಳಿಬಿದ್ದ ಹಿನ್ನೆಲೆಯಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ಪ್ರತಿಮೆ ಉರುಳಿ ಬಿದ್ದಿದ್ದಕ್ಕೆ ಅಜಿತ್ ಪವಾರ್ ಅವರು ರಾಜ್ಯದ ಜನರ ಕ್ಷಮೆ ಕೋರಿದ್ದರು.
ಘಟನೆ ಕುರಿತು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ಘಟನೆಗೆ ಸಂಬಂಧಿಸಿದಂತೆ ಛತ್ರಪತಿ ಶಿವಾಜಿ ಮಹಾರಾಜರ ಪಾದಗಳಿಗೆ ನೂರು ಬಾರಿ ನಮಿಸಿ, ಕ್ಷಮೆ ಕೇಳುತ್ತೇನೆ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದರು. ಪ್ರತಿಮೆ ಉರುಳಿಬಿದ್ದ ಪ್ರಕರಣದ ತನಿಖೆ ನಡೆಸಲು ತಾಂತ್ರಿಕ ಸಮಿತಿಯೊಂದನ್ನು ಸರ್ಕಾರ ರಚಿಸಿದೆ. ಭಾರತೀಯ ನೌಕಾದಳವು ಈ ಯೋಜನೆ ಕೈಗೊಂಡಿತ್ತು ಎಂದು ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.