ADVERTISEMENT

ದೆಹಲಿ ವಾಯಮಾಲಿನ್ಯದ ಪರಿಣಾಮ ಉತ್ತರ ಪ್ರದೇಶಕ್ಕೂ ವ್ಯಾಪಿಸುತ್ತಿದೆ: ಅಖಿಲೇಶ್

ಪಿಟಿಐ
Published 28 ಅಕ್ಟೋಬರ್ 2024, 4:39 IST
Last Updated 28 ಅಕ್ಟೋಬರ್ 2024, 4:39 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್    

ಲಖನೌ: ದೆಹಲಿ ವಾಯುಮಾಲಿನ್ಯ ಸಮಸ್ಯೆಯನ್ನು ‘ವಾರ್ಷಿಕ ವಿಷಯ’ ಎಂದು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅದರ ಪರಿಣಾಮಗಳು ಉತ್ತರ ಪ್ರದೇಶವನ್ನು ವ್ಯಾಪಿಸಲು ಪ್ರಾರಂಭಿಸಿವೆ ಎಂದು ಆತಂಕ ಹೊರಹಾಕಿದ್ದಾರೆ.

ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಧಾರಿಸಿದ್ದ ಗಾಳಿಯ ಗುಣಮಟ್ಟವು ಭಾನುವಾರ ಮತ್ತೆ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿತ್ತು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್‌ ಯಾದವ್, ‘ಇದೀಗ ದೆಹಲಿಯ ವಾಯು ಮಾಲಿನ್ಯ ಸಮಸ್ಯೆಯು ವಾರ್ಷಿಕ ವಿಷಯವಾಗಿದೆ. ರಾಷ್ಟ್ರ ರಾಜಧಾನಿಯ ಪರಿಸರವನ್ನು ಸ್ವಚ್ಛವಾಗಿ, ಆರೋಗ್ಯಕರವಾಗಿಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗದಿದ್ದಾಗ, ದೇಶದ ಉಳಿದ ಭಾಗಗಳ ಗತಿಯೇನು? ಇದನ್ನೇ ‘ದೀಪದ ಕೆಳಗೆ ಕತ್ತಲೆ’ ಎಂದು ಕರೆಯುವುದು’ ಎಂದಿದ್ದಾರೆ.

ADVERTISEMENT

‘ಭಾರತವನ್ನು ಕಂಡು ವಿಶ್ವವೇ ಹೆಮ್ಮೆಪಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ದೇಶದ ರಾಜಧಾನಿಯ ಚಿತ್ರಣವನ್ನು ಹೊಗೆಯಿಂದ ಮಸುಕಾಗದಂತೆ ಉಳಿಸಲು ಬಿಜೆಪಿ ನೇತೃತ್ವದ ಸರ್ಕಾರಕೆ ಸಾಧ್ಯವಾಗುತ್ತಿಲ್ಲ. ವಿಶ್ವದ ಹಲವು ದೇಶಗಳ ರಾಯಭಾರಿಗಳು ಮತ್ತು ರಾಜತಾಂತ್ರಿಕರ ಕಚೇರಿಗಳು ದೆಹಲಿಯಲ್ಲಿವೆ. ಇದು ಅವರಿಗೆ ಯಾವ ಸಂದೇಶವನ್ನು ನೀಡುತ್ತದೆ? ಇದು ಬಿಜೆಪಿ ಸರ್ಕಾರದ ಆಡಳಿತ ಮತ್ತು ನೀತಿಗಳ ವೈಫಲ್ಯ’ ಎಂದು ಕಿಡಿಕಾರಿದ್ದಾರೆ.

‘ಇದೀಗ ವಾಯುಮಾಲಿನ್ಯದ ಪರಿಣಾಮಗಳು ಉತ್ತರ ಪ್ರದೇಶವನ್ನು ವ್ಯಾಪಿಸಲು ಪ್ರಾರಂಭಿಸಿವೆ. ಯಮುನೆಯ ಜಲಮಾಲಿನ್ಯವಾಗಲಿ, ವಾಯುಮಾಲಿನ್ಯವಾಗಲಿ... ಸಾರ್ಜಜನಿಕರ ಆರೋಗ್ಯದ ಮೇಲೆ ಇವುಗಳ ಪರಿಣಾಮ ಬೀರುತ್ತಿದೆ. ತಾಜ್‌ ಮಹಲ್ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತಿದೆ. ಉತ್ತರ ಪ್ರದೇಶ ಸರ್ಕಾರ ಏನು ನಡೆದಿಲ್ಲವೆಂಬಂತೆ ವರ್ತಿಸುತ್ತಿದೆ’ ಎಂದು ಹೇಳಿದ್ದಾರೆ.

‘ನಮ್ಮ ಮೇಲೆ ಅವಲಂಬಿತರಾಗಬೇಡಿ, ನಿಮ್ಮ ಬಗ್ಗೆ ನೀವೇ ಕಾಳಜಿ ವಹಿಸಿ’ ಎಂದು ವಿಫಲ ಬಿಜೆಪಿ ಸರ್ಕಾರ ಸಾರ್ವಜನಿಕರಿಗೆ ಸಂದೇಶ ನೀಡುತ್ತಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಪ್ರಾಣ ಮತ್ತು ಆರೋಗ್ಯವನ್ನು ತಾವೇ ರಕ್ಷಿಸಿಕೊಳ್ಳಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.