ADVERTISEMENT

ಬ್ರಾಹ್ಮಣ ಶಾಸಕನಿಗೆ ಮಣೆಹಾಕಿದ ಅಖಿಲೇಶ್‌

ಉತ್ತರ ಪ್ರದೇಶ ವಿಪಕ್ಷ ನಾಯಕನ ಹುದ್ದೆ; ಸಮಾಜವಾದಿ ಪಕ್ಷದಿಂದ ಅಚ್ಚರಿಯ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 16:25 IST
Last Updated 28 ಜುಲೈ 2024, 16:25 IST
ಮಾತಾ ಪ್ರಸಾದ್‌ ಪಾಂಡೆ
ಮಾತಾ ಪ್ರಸಾದ್‌ ಪಾಂಡೆ   

ಲಖನೌ: ತಮ್ಮ ರಾಜೀನಾಮೆಯಿಂದ ತೆರವಾದ ಉತ್ತರಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪಕ್ಷದ ಹಿರಿಯ ಮುಖಂಡ, ಬ್ರಾಹ್ಮಣ ಸಮುದಾಯದ ಮಾತಾ ಪ್ರಸಾದ್‌ ಪಾಂಡೆ ಅವರನ್ನು ನಾಮನಿರ್ದೇಶನ ಮಾಡಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ನಿರ್ಧಾರ ಪ್ರಕಟಿಸಿದ್ದಾರೆ.  ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಖಿಲೇಶ್‌ ಯಾದವ್‌ ಅವರು ಕನೌಜ್‌ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಕರ್ಹಾಲ್‌ನ ಶಾಸಕ ಸ್ಥಾನ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. 

ಅಖಿಲೇಶ್‌ ಯಾದವ್‌ ನೇತೃತ್ವದಲ್ಲಿ ಭಾನುವಾರ ಇಲ್ಲಿ ನಡೆದ ಸಮಾಜವಾದಿ ಪಕ್ಷದ ಶಾಸಕರ ಸಭೆಯಲ್ಲಿ ಮಾತಾ ಪ್ರಸಾದ್‌ ಪಾಂಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಿದ್ದಾರ್ಥನಗರ ಜಿಲ್ಲೆಯ ಇಟಾವಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಇವರು, ಈ ಹಿಂದೆ ಎರಡು ಬಾರಿ ವಿಧಾನಸಭಾ ಸ್ಪೀಕರ್‌ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಪಾಂಡೆ ಅವರು, ಪಕ್ಷದಲ್ಲಿ ಪ್ರಮುಖ ಬ್ರಾಹ್ಮಣ ಮುಖಂಡರಾಗಿ ಗುರುತಿಸಿಕೊಂಡಿದ್ದು, ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಒಬಿಸಿ, ಎಸ್‌.ಸಿ ಶಾಸಕರಿಗೆ ತೀವ್ರ ನಿರಾಸೆಯಾಗಿದೆ. ಸಮಾಜವಾದಿ ಪಕ್ಷವು ಬ್ರಾಹ್ಮಣರ ವಿರೋಧಿಯಾಗಿದ್ದು, ಯಾದವ, ಮುಸಲ್ಮಾನರಿಗೆ ಸೀಮಿತವಾದ ಪಕ್ಷ ಎಂದು ಬಿಜೆಪಿ ಸದಾ ಸದಾ ಆರೋಪಿಸುತ್ತಿತ್ತು. ಇದಕ್ಕೆ ತಿರುಗೇಟು ನೀಡಿ, ಬಿಜೆಪಿಯ ಬ್ರಾಹ್ಮಣರ ಮತಬ್ಯಾಂಕ್‌ ಛಿದ್ರಗೊಳಿಸುವ ನಿಟ್ಟಿನಲ್ಲಿ ಪಾಂಡೆ ಅವರನ್ನು ನೇಮಕಗೊಳಿಸಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT