ADVERTISEMENT

ಸ್ನೇಹಿತರನ್ನು ಕಳೆದುಕೊಳ್ಳುತ್ತಿರುವ ಅಖಿಲೇಶ್‌ ಯಾದವ್‌: ಸಂಕಷ್ಟದಲ್ಲಿ ಎಸ್‌ಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2022, 6:16 IST
Last Updated 13 ನವೆಂಬರ್ 2022, 6:16 IST
   

ಲಕ್ನೊ: ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಅತ್ಯಗತ್ಯವಿರುವಾಗ ಸ್ನೇಹಿತರನ್ನು ಕಳೆದುಕೊಳ್ಳುತ್ತಿದ್ದು, ಮುಲಾಯಂ ಸಿಂಗ್‌ ಯಾದವ್‌ ಪ್ರತಿನಿಧಿಸುತ್ತಿದ್ದ ಮೇನ್‌ಪುರಿ ಲೋಕಸಭಾ ಕ್ಷೇತ್ರವನ್ನು ಈ ಸಲ ಪಕ್ಷ ಕಳೆದುಕೊಳ್ಳುವ ಸಾಧ್ಯತೆಯಿದೆ.

ಸಮಾಜವಾದಿ ಪಕ್ಷದ ಭದ್ರಕೋಟೆ ಎನಿಸಿರುವ ಕ್ಷೇತ್ರವು ಮುಲಾಯಂ ನಿಧನದಿಂದ ತೆರವಾಗಿದ್ದು, ಅಖಿಲೇಶ್‌ ಪತ್ನಿ ಡಿಂಪಲ್‌ ಯಾದವ್‌ ಅವರಿಗೆ ಪಕ್ಷವು ಉಪಚುನಾವಣೆಯಲ್ಲಿ ಟಿಕೆಟ್‌ ನೀಡಿದೆ. ಈ ಕ್ಷೇತ್ರದಿಂದ ಮುಲಾಯಂ ಸೋಲು ಕಂಡಿರಲಿಲ್ಲ. ಹೀಗಾಗಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಎಸ್‌ಪಿಗೆ ಅತ್ಯಂತ ಮಹತ್ವದ್ದಾಗಿದೆ.

ಆಢಳಿತಾರೂಢ ಬಿಜೆಪಿ ಇಲ್ಲಿ ಅಭ್ಯರ್ಥಿಯನ್ನು ಘೋಷಿಸಬೇಕಿದೆ. ಎಸ್‌ಪಿ ಮಾಜಿ ಮಿತ್ರರು ಕ್ಷೇತ್ರದಲ್ಲಿ ಎಸ್‌ಪಿ ಸೋಲಲಿದೆ ಎಂದು ಅಂದಾಜಿಸಿದ್ದಾರೆ. ಸುಹಲ್‌ದೇವ್‌ ಎಸ್‌ಪಿ(ಎಸ್‌ಎಸ್‌ಪಿ) ಮಾಜಿ ಮಿತ್ರಪಕ್ಷವಾದ ಭಾರತೀಯ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮಾತ್ರವಲ್ಲದೇ, ಎಸ್‌ಪಿ ಸೋಲುತ್ತದೆ ಎಂದು ಲೆಕ್ಕಾಚಾರ ಹಾಕಿದೆ. ‘ಅಖಿಲೇಶ್‌ಗೆ ಸ್ನೇಹಿತರಿಗಿಂತ ಶತೃಗಳು ಹೆಚ್ಚಾಗಿದ್ದಾರೆ. ಅವರ ಕುಟುಂಬದಲ್ಲೇ ಎಲ್ಲವೂ ಸರಿಯಾಗಿಲ್ಲ. ಪಕ್ಷವು ಏಕಾಂಗಿಯಾಗಿದೆ. ವಿಭೂಷಣನಿಂದ ರಾವಣ ಸೋತಿದ್ದು ಎಂಬದುನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಎಸ್‌ಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್‌ ರಾಜ್‌ಭರ್‌ ಹೇಳಿದ್ದಾರೆ.

ADVERTISEMENT

ಡಿಂಪಲ್‌ ಯಾದವ್‌ಗೆ ಅವಕಾಶ ನೀಡಿರುವುದನ್ನು ಎಸ್‌ಪಿ ಮಿತ್ರ ಪಕ್ಷವಾಗಿದ್ದ ಮಹಾನ್‌ ದಳ್‌ ಕೂಡ ಟೀಕಿಸಿದೆ. ಪ್ರಗತಿಶೀಲ ಸಮಾಜವಾದಿ ಪಕ್ಷದ ಶಿವಪಾಲ್‌ ಯಾದವ್‌ ಕೂಡ ಡಿಂಪಲ್‌ ವಿಷಯದಲ್ಲಿ ಮೌನಿಯಾಗಿದ್ದಾರೆ. ಜಸ್ವಂತ್‌ನಗರ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಿವಪಾಲ್‌ ಬೆಂಬಲ ಎಸ್‌ಪಿಗೆ ಅತ್ಯಗತ್ಯವಾಗಿದೆ. ದಾಯಾದಿ ಕಲಹ ಜೋರಾಗಿದ್ದು, ಡಿಂಪಲ್‌ಗೆ ಟಿಕೆಟ್‌ ನೀಡುವ ವಿಷಯದಲ್ಲಿ ಅಖಿಲೇಶ್‌ ಕುಟುಂಬದರ ಜೊತೆ ಮಾತನಾಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಐಎಎನ್‌ಎಸ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.