ಲಖನೌ: ‘ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ದಿನವೇ ಅಖಿಲೇಶ್ ಯಾದವ್ ಅವರು ಮಾಯಾವತಿ ಅವರಿಗೆ ಮೋಸ ಮಾಡುವುದು ಖಚಿತ’ ಎಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಹೇಳಿದ್ದಾರೆ.
ಸಮಾಜವಾದಿ ಪಕ್ಷವು ಯಾವತ್ತೂ ದಲಿತರನ್ನು ಗೌರವಿಸಿಲ್ಲ. ಹಿಂದೆ ಆ ಪಕ್ಷದ ನಾಯಕರು ಸರ್ಕಾರಿ ಅತಿಥಿಗೃಹದಲ್ಲಿ ಮಾಯಾವತಿ ಅವರ ಮೇಲೆ ಹಲ್ಲೆ ಮಾಡಿದ್ದರು. ಆಗ ಮಾಯಾವತಿಯನ್ನು ಬಿಜೆಪಿಯವರು ರಕ್ಷಿಸಿದ್ದರು. ಚುನಾವಣೆಯ ಬಳಿಕ ಮಾಯಾವತಿ ಪುನಃ ವಂಚನೆಗೊಳಗಾಗಲಿದ್ದು, ಆನಂತರ ಬಿಜೆಪಿಯು ಅವರನ್ನು ಬೆಂಬಲಿಸುವುದು’ ಎಂದರು.
‘ಮಾಯಾವತಿ ಕಷ್ಟಕ್ಕೆ ಸಿಲುಕಿದಾಗಲೆಲ್ಲ ಬಿಜೆಪಿಯು ಅವರ ಬೆಂಬಲಕ್ಕೆ ನಿಂತಿದೆ’ ಎಂದು ಮೌರ್ಯ ಹೇಳಿದರು.
‘ಮುಸ್ಲಿಂ ಮತದಾರರು ಸಂಘಟಿತರಾಗಬೇಕು, ಮತಗಳು ವಿಭಜನೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಎಸ್‌ಪಿ–ಬಿಎಸ್‌ಪಿ ಜಂಟಿ ರ್‍ಯಾಲಿಯಲ್ಲಿ ಮಾಯಾವತಿ ಕರೆ ನೀಡಿದ್ದರು. ಮರುದಿನವೇ ಮೌರ್ಯ ಅವರು ಈ ಹೇಳಿಕೆ ನೀಡಿದ್ದಾರೆ.
ಮಾಯಾವತಿ ಭಾಷಣ: ಆಯೋಗಕ್ಕೆ ವರದಿ
ನವದೆಹಲಿ (ಪಿಟಿಐ): ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಚುನಾವಣಾ ರ್‍ಯಾಲಿಯಲ್ಲಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾಡಿರುವ ಭಾಷಣದ ವಿವರಗಳನ್ನು ಸಹಾರನ್‌ಪುರ ಜಿಲ್ಲಾಧಿಕಾರಿ ಸೋಮವಾರ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಕಳುಹಿಸಿಕೊಟ್ಟಿದ್ದಾರೆ.
‘ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಅವಕಾಶ ನೀಡಬಾರದು. ಮುಸ್ಲಿಮರು ಒಗ್ಗಟ್ಟಾಗಿ ಎಸ್‌ಪಿ– ಬಿಎಸ್‌ಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು’ ಎಂದು ಮಾಯಾವತಿ ಅವರು ಚುನಾವಣಾ ರ್‍ಯಾಲಿಯಲ್ಲಿ ಮನವಿ ಮಾಡಿದ್ದರು. ಈ ರ್‍ಯಾಲಿಯಲ್ಲಿ ಮಾಯಾವತಿ ಅವರು ಮಾಡಿರುವ ಭಾಷಣದ ವಾಸ್ತವ ವರದಿಯನ್ನು ಕಳುಹಿಸಿಕೊಡುವಂತೆ ಮುಖ್ಯ ಚುನಾವಣಾಧಿಕಾರಿ ಭಾನುವಾರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು.
ಚುನಾವಣಾ ನೀತಿ ಸಂಹಿತೆಯ ಪ್ರಕಾರ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತಯಾಚನೆ ಮಾಡುವಂತಿಲ್ಲ. ಮಾಯಾವತಿ ಅವರ ಭಾಷಣ ಈ ನಿಯಮದ ಉಲ್ಲಂಘನೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲು ಆಯೋಗವು ಜಿಲ್ಲಾಧಿಕಾರಿಯಿಂದ ವರದಿಯನ್ನು ತರಿಸಿಕೊಂಡಿದೆ. ಇನ್ನೆರಡು ದಿನಗಳೊಳಗೆ ಆಯೋಗದ ಈ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.