ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರಿ ಭೂ ಹಗರಣ ನಡೆದಿದ್ದು, ಇದರಲ್ಲಿ ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಹಾಗೂ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿ, ಪವಿತ್ರ ನಗರಿಯಲ್ಲಿ ನಡೆಯುತ್ತಿರುವ ಭೂಕಬಳಿಕೆಯು ಅಧಿಕಾರದಲ್ಲಿರುವವರ ಭಾರಿ ಭ್ರಷ್ಟಾಚಾರದ ಭಾಗವಾಗಿದೆ ಎಂದು ಹೇಳಿದರು. ಪತ್ರಿಕೆಯೊಂದರ ವರದಿಗೆ ಸಂಬಂಧಿಸಿದಂತೆ ಯಾದವ್ ಅವರು ಯೋಗಿ ಆದಿತ್ಯನಾಥ್ ಅವರ ಮೇಲೆ ವಾಗ್ದಾಳಿ ನಡೆಸಿದರು.
‘ಅಧಿಕಾರಿಗಳು ಹಾಗೂ ಬಿಜೆಪಿ ಸದಸ್ಯರು ಲೂಟಿಯಲ್ಲಿ ನಿರತರಾಗಿದ್ದಾರೆ. ಅಯೋಧ್ಯೆಯಲ್ಲಿ ನಡೆದಿರುವ ಲೂಟಿಯ ಕರಾಳ ಸತ್ಯವನ್ನು ಬಯಲಿಗೆಳೆದ ನಮ್ಮ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪವಿತ್ರ ಕ್ಷೇತ್ರದಲ್ಲಿಯೇ ಇಂಥ ಘಟನೆ ನಡೆದಿದೆ ಎಂದರೆ ಉತ್ತರ ಪ್ರದೇಶದ ಇತರೆ ಜಿಲ್ಲೆಗಳಲ್ಲಿ ಇನ್ನೆಷ್ಟು ಇಂಥ ಪ್ರಕರಣಗಳು ನಡೆದಿರಬಹುದು’ ಎಂದರು.
ಭೂಮಿಗೆ ಸಾಕಷ್ಟು ಬೆಲೆ ಇರುವ ಸಂದರ್ಭದಲ್ಲಿ ಉತ್ತಮ ಕಾರ್ಯಕ್ಕಾಗಿ ತಮ್ಮ ಜಮೀನನ್ನು ನೀಡಲು ಮುಂದಾದ ರೈತರಿಗೆ ಪರಿಹಾರವನ್ನೂ ನಿರಾಕರಿಸಲಾಗಿದೆ. 'ಬಡ ಹಾಗೂ ಮುಗ್ಧ ಜನರ ಜಮೀನನ್ನು ಪಡೆದು ಇತರರಿಗೆ ನೀಡಿದ ಬಳಿಕ ಅಯೋಧ್ಯೆಯಲ್ಲಿ ಭೂಮಿಯ ಮೌಲ್ಯವೂ ಹೆಚ್ಚಾಗಿದೆ. ಇದು ಸರ್ಕಾರಕ್ಕಾದ ನಷ್ಟವಲ್ಲವೇ?’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರು ಭಾಗಿಯಾಗಿರುವ ಹಗರಣದ ಭೂ ದಾಖಲಾತಿಗಳ ಪ್ರತಿಗಳು ನಮ್ಮ ಬಳಿ ಇವೆ. ಫಿರಂಗಿ ಅಭ್ಯಾಸಕ್ಕೆ ಇದ್ದ ರಕ್ಷಣಾ ಇಲಾಖೆಯ ಭೂಮಿಯನ್ನೂ ಬಿಜೆಪಿ ಸದಸ್ಯರು ಮಾರಿದ್ದಾರೆ. ಅಲ್ಲದೇ, ಬಡಜನರ ಭೂಮಿಗೆ ಯಾವುದೇ ಸಮಸ್ಯೆ ಉಂಟು ಮಾಡದಿದ್ದ ರೈಲ್ವೆ ಹಳಿ ಸಂಯೋಜನೆಗಳನ್ನೂ ಬದಲಾಯಿಸಿದ್ದಾರೆ’ ಎಂದು ಯಾದವ್ ಆರೋಪಿಸಿದರು.
‘ಇನ್ನು ಎರಡು ವರ್ಷಗಳಲ್ಲಿ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದಾಗ ಅಯೋಧ್ಯೆಯನ್ನು ವಿಶ್ವದರ್ಜೆಯ ನಗರವನ್ನಾಗಿಸುತ್ತೇವೆ ಮತ್ತು ರೈತರು ಹಾಗೂ ಬಡ ಜನರಿಗೆ ಆಗಿರುವ ನಷ್ಟವನ್ನು ಭರಿಸುತ್ತೇವೆ’ ಎಂದು ಅಭಯ ನೀಡಿದ್ದಾರೆ.
ಈ ಹಿಂದೆ ಅಯೋಧ್ಯೆಯಲ್ಲಿ ಭೂಮಿಯನ್ನು ಹೊರಗಿನವರಿಗೆ ಮಾರಾಟ ಮಾಡಿರುವುದು ಕೋಟ್ಯಾನು ರೂಪಾಯಿಗಳು ಹಗರಣವಾಗಿದೆ ಎಂದು ಆರೋಪಿಸಿದ್ದ ಅವರು, ಈ ಭೂಮಿ ಮಾರಾಟಗಳ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದೂ ಯಾದವ್ ಅವರು ಜುಲೈ 10ರಂದು ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.