ADVERTISEMENT

ಅಗ್ನಿಪಥ ಯೋಜನೆ: ಲೋಕಸಭೆಯಲ್ಲಿ ಠಾಕೂರ್–ಯಾದವ್ ಮಾತಿನ ಸಮರ

ಪಿಟಿಐ
Published 30 ಜುಲೈ 2024, 11:19 IST
Last Updated 30 ಜುಲೈ 2024, 11:19 IST
<div class="paragraphs"><p>ಅನುರಾಗ್ ಠಾಕೂರ್ ಮತ್ತು&nbsp;ಅಖಿಲೇಶ್ ಯಾದವ್</p></div>

ಅನುರಾಗ್ ಠಾಕೂರ್ ಮತ್ತು ಅಖಿಲೇಶ್ ಯಾದವ್

   

ನವದೆಹಲಿ: ಅಗ್ನಿಪಥ ಯೋಜನೆ ಕುರಿತಂತೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ಮಾತಿನ ಚಕಮಕಿ ನಡೆಯಿತು.

ಬಜೆಟ್ ಮೇಲಿನ ಚರ್ಚೆ ವೇಳೆ ಅಗ್ನಿಪಥ ಯೋಜನೆ ವಿಷಯ ಪ್ರಸ್ತಾಪಿಸಿದ ಅಖಿಲೇಶ್ ಯಾದವ್, ‘ಅಗ್ನಿಪಥ ಯೋಜನೆಯನ್ನು ಉತ್ತೇಜಿಸಲು ಆರಂಭದಲ್ಲಿ ಪ್ರಮುಖ ಕೈಗಾರಿಕೋದ್ಯಮಿಗಳಿಂದ ಯೋಜನೆ ಪರ ಟ್ವೀಟ್ ಮಾಡಿಸಲಾಯಿತು’ ಎಂದು ಆರೋಪಿಸಿದರು.

ADVERTISEMENT

‘ಅಗ್ನಿಪಥ ಯೋಜನೆಯನ್ನು ಮೊದಲು ಪರಿಚಯಿಸಿದಾಗ, ಯೋಜನೆ ಪರ ಪ್ರಮುಖ ಕೈಗಾರಿಕೋದ್ಯಮಿಗಳಿಂದ ಟ್ವೀಟ್‌ಗಳನ್ನು ಮಾಡಿಸಲಾಯಿತು. ಇಂತಹ ಯೋಜನೆ ಮತ್ತೊಂದಿಲ್ಲ ಎಂದು ಹೇಳಿಸುವ ಮೂಲಕ ಅಗ್ನಿವೀರರಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ಅವರಿಂದ ನೀಡಲಾಯಿತು. ಇದೀಗ ಅಗ್ನಿಪಥ ಯೋಜನೆ ಸರಿಯಿಲ್ಲ ಎಂದು ಸರ್ಕಾರವೆ ಒಪ್ಪಿಕೊಂಡಿದೆ. ಏಕೆಂದರೆ ಸೇವೆಯಿಂದ ಹಿಂದಿರುಗಿದ ನಂತರ ಅಗ್ನಿವೀರರಿಗೆ ಮೀಸಲಾತಿ ಮತ್ತು ಉದ್ಯೋಗಗಳನ್ನು ನೀಡುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವನ್ನು ಕೇಳುತ್ತಿದೆ’ ಎಂದು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುರಾಗ್ ಠಾಕೂರ್, ಅಗ್ನಿಪಥ ಯೋಜನೆಯನ್ನು ಬೆಂಬಲಿಸಿ ಮಾತನಾಡಿದರು.

‘ಮೊದಲ ಪರಮವೀರ ಚಕ್ರ ಪುರಸ್ಕೃತ ಸೋಮನಾಥ ಶರ್ಮಾ ಅವರನ್ನು ನೀಡಿದ ಹಿಮಾಚಲ ಪ್ರದೇಶದಿಂದ ನಾನು ಬಂದಿದ್ದೇನೆ. ಕಾರ್ಗಿಲ್‌ ಯುದ್ಧದಲ್ಲಿ ಅತಿ ಹೆಚ್ಚು ಹುತಾತ್ಮರಾದವರು ನಮ್ಮ ರಾಜ್ಯದವರೇ ಆಗಿದ್ದಾರೆ. ‘ಒಂದು ಶ್ರೇಣಿ– ಒಂದು ಪಿಂಚಣಿ’ ಎಂಬ ಬಹುದಿನಗಳ ಬೇಡಿಕೆಯನ್ನು ನರೇಂದ್ರ ಮೋದಿ ಸರ್ಕಾರ ಈಡೇರಿಸಿದೆ. ಹಾಗೆಯೇ ಅಗ್ನಿಪಥ ಯೋಜನೆಯೂ ಶೇ 100ರಷ್ಟು ಉದ್ಯೋಗಗಳನ್ನು ಖಾತರಿಪಡಿಸಲಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಯಾದವ್, ‘ನಾನು ಕೇಳಿರುವುದು ತುಂಬಾ ಸರಳವಾದ ಪ್ರಶ್ನೆ. ನಿಜವಾಗಿಯೂ ಅಗ್ನಿಪಥ ಯೋಜನೆ ಪ್ರಯೋಜನಕಾರಿಯಾಗಿದ್ದರೆ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ರಾಜ್ಯ ಸರ್ಕಾರವು ಕೋಟಾವನ್ನು ಏಕೆ ನೀಡುವ ಅಗತ್ಯವಿದೆ’ ಎಂದು ಪ್ರಶ್ನಿಸಿದರು.

‘ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಕೇವಲ ಉಪದೇಶ ಮಾಡಬೇಡಿ. ರಾಹುಲ್ ಗಾಂಧಿಯವರೊಂದಿಗೆ ಕುಳಿತು ಸುಳ್ಳುಗಳನ್ನು ಹರಡುವುದನ್ನು ನೀವು ಅಭ್ಯಾಸ ಮಾಡಿಕೊಂಡಿದ್ದೀರಿ’ ಎಂದು ಅನುರಾಗ್ ಠಾಕೂರ್ ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಾದವ್, ‘ಸಚಿವರಾಗಿ ಮುಂದುವರಿಯಲಿಲ್ಲ ಎಂಬ ಬೇಸರ ನಿಮಗೆ ಇರಬಹುದು. ನಿಮ್ಮ ಸಂಕಟ ನಿಮ್ಮ ಮುಖದಲ್ಲಿ ಗೋಚರಿಸುತ್ತಿದೆ. ನಮ್ಮ ನೋವು ನಿಮಗೆ ಅರ್ಥವಾಗುವುದಿಲ್ಲ’ ಎಂದು ಮಾತು ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.