ADVERTISEMENT

ಉತ್ತರಪ್ರದೇಶ: ಮಾಯಾವತಿ ಭೇಟಿ ಮಾಡಿದ ಅಖಿಲೇಶ್‌; ಕಾಂಗ್ರೆಸ್‌ ಹೊರಗಿಟ್ಟು ಮೈತ್ರಿ?

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 2:56 IST
Last Updated 5 ಜನವರಿ 2019, 2:56 IST
   

ನವದೆಹಲಿ:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಿಂದ ಒಂದು ಕಾಲದಲ್ಲಿ ತೀವ್ರ ಪ್ರತಿ ಪ್ರತಿಸ್ಪರ್ಧಿಗಳಾಗಿದ್ದ ಸಮಾಜವಾದಿ ಪಕ್ಷ (ಎಸ್‌ಪಿ) ಮುಖಂಡ ಅಖಿಲೇಶ್ ಯಾದವ್ ಶುಕ್ರವಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮಾಯಾವತಿ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ಅನ್ನು ಹೊರಗಿಟ್ಟು ಮಹಾ ಮೈತ್ರಿಗೆ ಸೂತ್ರಗಳನ್ನು ಹೆಣೆಯುತ್ತಿದ್ದಾರೆ.

ಇಬ್ಬರೂ ನಾಯಕರು ಕಾಂಗ್ರೆಸ್‌ನೊಂದಿಗೆ ಅಸಮಾಧಾನ ಹೊಂದಿದ್ದಾರೆ. ಕಾಂಗ್ರೆಸ್ಅನ್ನು ಹೊರಗಿಟ್ಟು ಮೈತ್ರಿ ರಚನೆಗೆ ಮುಂದಾಗಿದ್ದಾರೆಂದು ಮೂಲಗಳು ತಿಳಿಸಿರುವುದಾಗಿಎನ್‌ಡಿ ಟಿ.ವಿ ವರದಿ ಮಾಡಿದೆ.

ಎಸ್‌ಪಿ, ಬಿಎಸ್‌ಪಿ ಮೈತ್ರಿ ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸುವ ತಯಾರಿ ನಡೆಸಿದೆ ಎನ್ನಲಾಗಿದೆ.

ADVERTISEMENT

ಮೈತ್ರಿ ಮೂಲಗಳ ಪ್ರಕಾರ, ಸಣ್ಣ ಪಕ್ಷಗಳಿಗೆ ಸ್ಥಳಾವಕಾಶವಿದೆ. ಜ.15ರ ನಂತರ ಸ್ಥಾನ ಹಂಚಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಲೋಕ ದಳ(ಆರ್‌ಎಲ್‌ಡಿ) ಮೈತ್ರಿ ಕೂಟದಲ್ಲಿ ಮೂರು ಸ್ಥಾನ ಪಡೆಯುವ ಸಾಧ್ಯತೆ ಇದೆ.

ಕಾಗ್ರೆಸ್‌ ಅನ್ನು ಮೈತ್ರಿ ಕೂಟದಿಂದ ಹೊರಗಿಡಲಾಗಿದ್ದರೂ, ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ಅಮೇಥಿ ಮತ್ತು ರಾಯ್‌ ಬರೇಲಿಯಲ್ಲಿ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿಲ್ಲ ಎಂದು ಮೂಲಗಳು ಹೇಳಿವೆ.

ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಮೈತ್ರಿಯ ಸುಳಿವು ಸಿಗುತ್ತಿದ್ದಂತೆಯೇ ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಏಕಾಂಗಿಯಾಗಿ ಏಕಾಂಗಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸಿದ್ದು, ಈ ಬಗ್ಗೆ ಸುಳಿವು ನೀಡಿದೆ.

ಎಸ್‌ಪಿ–ಬಿಎಸ್‌ಪಿ ಜತೆ ಕೈಜೋಡಿಸಿದರೆ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ದಕ್ಕುವುದು ಅನುಮಾನ. ರಾಯ್‌ ಬರೇಲಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡುವ ಸಾಧ್ಯತೆ ಇದೆ ಎಂದು ರಾಜ್ಯ ನಾಯಕರು ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಪಕ್ಷ 80 ಸ್ಥಾನಗಳ ಪೈಕಿ 73 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಮಾಯಾವತಿ ಮತ್ತು ಅಖಿಲೇಶ್‌ ಪ್ರಮುಖ ಕ್ಷೇತ್ರಗಳಾದ ಗೋರಖ್‌ಪುರ ಮತ್ತು ಪುಲ್ಪುರ್‌ ಕ್ಷೇತ್ರಗಳನ್ನು ಕಳೆದುಕೊಂಡಿದ್ದರು.

ಅಖಿಲೇಶ್ ಯಾದವ್ ಮತ್ತು ಮಾಯಾವತಿ ಮುಂದಿನ ವಾರ ಮತ್ತೆ ಭೇಟಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.