ADVERTISEMENT

ಬಿಜೆಪಿ 140 ಸ್ಥಾನಗಳಲ್ಲಷ್ಟೇ ಗೆಲ್ಲಲಿದೆ: ಅಖಿಲೇಶ್‌ ಯಾದವ್‌

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:20 IST
Last Updated 25 ಮೇ 2024, 15:20 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ದೇವರಿಯಾ (ಉತ್ತರ ಪ್ರದೇಶ): ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆಂಬ ಬಿಜೆಪಿಯ ಘೋಷವಾಕ್ಯವು ನಿರರ್ಥಕವಾಗಲಿದೆ ಮತ್ತು ಆ ಪಕ್ಷವು 140 ಸ್ಥಾನಗಳಲ್ಲಷ್ಟೇ ಗೆಲ್ಲಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಶನಿವಾರ ಪ್ರತಿಪಾದಿಸಿದರು.

ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ನೀಡಿರುವ ಕಂಪನಿಗಳು ಸರಕುಗಳ ಬೆಲೆಯನ್ನು ಹೆಚ್ಚಿಸಲಿವೆ. ಇದರಿಂದ ಹಣದುಬ್ಬರ ಏರಿಕೆಯಾಗಲಿದೆ ಎಂದರು.

ದೇವರಿಯಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಖಿಲೇಶ್‌ ಪ್ರತಾಪ್‌ ಸಿಂಗ್‌ ಹಾಗೂ ಕುಶಿನಗರ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಅಜಯ್‌ ಕುಮಾರ್‌ ಸಿಂಗ್‌ ಪರ ಹಮ್ಮಿಕೊಂಡಿದ್ದ ಜಂಟಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದು ಹೇಳಿದರು.

ADVERTISEMENT

‘ಇಂಡಿಯಾ’ ಒಕ್ಕೂಟಕ್ಕೆ ಭಾರಿ ಬೆಂಬಲ ವ್ಯಕ್ತವಾಗಿರುವುದನ್ನು ಗಮನಿಸಿದರೆ, ಜೂನ್‌ 4ರಂದು ಬಿಜೆಪಿ ಖಂಡಿತವಾಗಿಯೂ ಉತ್ತರ ಪ್ರದೇಶದಲ್ಲಿ ಕೊಚ್ಚಿ ಹೋಗಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕೇಂದ್ರ ಸರ್ಕಾರ ಮಾತ್ರವಲ್ಲ, ಮಾಧ್ಯಮಗಳೂ ಬದಲಾಗಲಿವೆ’ ಎಂದು ಆಶಯ ವ್ಯಕ್ತಪಡಿಸಿದರು.

‘ಪೂರ್ವಾಂಚಲದ ಜನರು ನಮಗೆ ಆದ್ಧೂರಿಯ ಸ್ವಾಗತ ನೀಡಿದ್ದಾರೆ. 2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿ ಹೊರನಡೆಯಲಿದ್ದಾರೆ’ ಎಂದರು.

‘ಬಿಜೆಪಿಯು ಹುಸಿ ಭರವಸೆಗಳನ್ನು ನೀಡಿದೆ. ಕೇಂದ್ರದ ಹತ್ತು ವರ್ಷಗಳ ಮತ್ತು ರಾಜ್ಯದ ಏಳು ವರ್ಷಗಳ ಬಿಜೆಪಿ ಆಡಳಿತದಲ್ಲಿ ರೈತರು ಮತ್ತು ಯುವಕರ ಭವಿಷ್ಯ ಅಪಾಯಕ್ಕೆ ಸಿಲುಕಿದೆ’ ಎಂದು ಹೇಳಿದರು.

ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟವು ಅಧಿಕಾರಕ್ಕೆ ಬಂದರೆ ‘ಅಗ್ನಿವೀರ್‌’ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಅಖಿಲೇಶ್‌ ಭರವಸೆ ನೀಡಿದರು.

ದೇವರಿಯಾ ಮತ್ತು ಕುಶಿನಗರ ಕ್ಷೇತ್ರಗಳಿಗೆ ಜೂನ್‌ 1ರಂದು ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.