ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಅಧಿಕಾರದಲ್ಲಿದ್ದಾಗ 15 ಮಂದಿ ಭಯೋತ್ಪಾದಕರ ಮೇಲಿನ ಪ್ರಕರಣವನ್ನು ಹಿಂಪಡೆದಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟೀಕಿಸಿದರು.
ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ‘ಜನ ವಿಶ್ವಾಸ ಯಾತ್ರೆ’ ಉದ್ದೇಶಿಸಿ ಮಾತನಾಡಿದ ಅವರು ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.
‘15 ಮಂದಿ ಭಯೋತ್ಪಾದಕರ ಮೇಲಿನ ಪ್ರಕರಣವನ್ನು ಅಖಿಲೇಶ್ ಹಿಂಪಡೆದಿದ್ದರು. ಮರಳಿ ಪ್ರಕರಣವನ್ನು ಕೈಗೆತ್ತಿಕೊಂಡ ಬಳಿಕ ಆ 15 ಮಂದಿಯಲ್ಲಿ ನಾಲ್ವರಿಗೆ ಮರಣದಂಡನೆಯಾಯಿತು. ಉಳಿದವರು ಜೀವಾವಧಿ ಶಿಕ್ಷೆಗೆ ಗುರಿಯಾದರು. ಈಗ ಹೇಳಿ, ಅಖಿಲೇಶ್ ಅವರು ರಕ್ಷಕರಾಗಿದ್ದರೋ ಅಥವಾ ಭಕ್ಷಕರಾಗಿದ್ದರೋ? ಅವರಿಗೆ ವಿಶ್ರಾಂತಿ ಕೊಟ್ಟು, ಯೋಗಿ ಆದಿತ್ಯನಾಥ್ ಅವರಿಗೆ ಕೆಲಸ ಕೊಡಿ’ ಎಂದು ನಡ್ಡಾ ಹೇಳಿದರು.
ಸ್ತ್ರೀಯರ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ ಎಸ್‌ಪಿ ಸಂಸದ ಎಸ್.ಟಿ.ಹಸನ್ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ತ್ರೀಯರ ಹಿತದೃಷ್ಟಿಯಿಂದ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದರೆ, ಹಸನ್ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಮಹಿಳಾ ಸಬಲೀಕರಣಕ್ಕೆ ವಿರುದ್ಧವಾದುದು. ಅದನ್ನು ಅಖಿಲೇಶ್ ಯಾದವ್ ಸಮರ್ಥಿಸಿಕೊಂಡಿದ್ದಾರೆ ಎಂದು ನಡ್ಡಾ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಹುಡುಗಿಯರು ವಯಸ್ಸಿಗೆ ಬಂದಾಗ ಮದುವೆಯಾಗಬೇಕು. 16ನೇ ವಯಸ್ಸಿನಲ್ಲೇ ಮದುವೆಯಾಗುವುದರಲ್ಲಿ ತಪ್ಪಿಲ್ಲ. 18ನೇ ವಯಸ್ಸಿನಲ್ಲಿ ಸ್ತ್ರೀಯರು ಮತ ಚಲಾಯಿಸಬಹುದಾದರೆ ಮದುವೆ ಯಾಕಾಗಬಾರದು ಎಂದು ಹಸನ್ ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.