ನವದೆಹಲಿ: ದೆಹಲಿ–ಎನ್‌ಸಿಆರ್‌ನಲ್ಲಿ ಗಾಳಿ ಗುಣಮಟ್ಟವು ತೀವ್ರ ಕಳಪೆ ಮಟ್ಟಕ್ಕೆ ಕುಸಿದಿದ್ದು, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ಕೂಡಲೇ ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ದೆಹಲಿಯ ವಾತಾವರಣವು ವರ್ಷದಿಂದ ವರ್ಷಕ್ಕೆ ಹೀಗೆ ಹಾಳಾಗಲು ಬಿಡಬಾರದು ಎಂದು ಹೇಳಿದೆ.
ಪಾಲಿಕೆಯ ಘನತ್ಯಾಜ್ಯವನ್ನು ಸುಡದಂತೆ ನೋಡಿಕೊಳ್ಳುವಂತೆ ದೆಹಲಿ ಸರ್ಕಾರಕ್ಕೂ ಕೋರ್ಟ್ ನಿರ್ದೇಶನ ನೀಡಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಪೀಠವು, ಬೆಳೆ ತ್ಯಾಜ್ಯ ಸುಡುವುದು, ವಾಹನ ಮಾಲಿನ್ಯ ಮತ್ತು ನಗರದ ಘನತ್ಯಾಜ್ಯವನ್ನು ಬಯಲಿನಲ್ಲಿ ಸುಡುವುದು ಮುಂತಾದ ವಿಷಯಗಳನ್ನು ಗಮನಕ್ಕೆ ತೆಗೆದುಕೊಂಡಿದೆ.
ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.
ಸತತ ಐದು ದಿನಗಳಿಂದ ದೆಹಲಿಯಲ್ಲಿ ಕಳಪೆ ಗಾಳಿಯ ಗುಣಮಟ್ಟ ದಾಖಲಾಗಿದ್ದು, ಇಂದೂ ಸಹ ಅತ್ಯಂತ ಕಳಪೆ ವಿಭಾಗದಲ್ಲಿ ಇತ್ತು.
ನೆರೆಯ ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಸಹ ಅಪಾಯಕಾರಿ ಗಾಳಿಯ ಗುಣಮಟ್ಟ ವರದಿಯಾಗಿದೆ. ಗಾಜಿಯಾಬಾದ್ 338, ಗುರುಗ್ರಾಮ್ 364, ನೋಯ್ಡಾ 348, ಗ್ರೇಟರ್ ನೋಯ್ಡಾ 439 ಮತ್ತು ಫರಿದಾಬಾದ್‌ನಲ್ಲಿ 382 ಎಕ್ಯೂಐ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.