ADVERTISEMENT

ಎಂಸಿಡಿ: ಎಎಪಿ ಸೇರಿದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ಗೆ ಮರಳಿದ ನೂತನ ಸದಸ್ಯರು

ಪಿಟಿಐ
Published 10 ಡಿಸೆಂಬರ್ 2022, 10:03 IST
Last Updated 10 ಡಿಸೆಂಬರ್ 2022, 10:03 IST
ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ದೆಹಲಿ ಕಾಂಗ್ರೆಸ್‌ ಉಪಾಧ್ಯಕ್ಷ ಅಲಿ ಮೆಹ್ದಿ | ಟ್ವಿಟರ್‌ ಚಿತ್ರ
ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ದೆಹಲಿ ಕಾಂಗ್ರೆಸ್‌ ಉಪಾಧ್ಯಕ್ಷ ಅಲಿ ಮೆಹ್ದಿ | ಟ್ವಿಟರ್‌ ಚಿತ್ರ   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಇಬ್ಬರು ನೂತನ ಸದಸ್ಯರು ಮತ್ತುದೆಹಲಿ ಕಾಂಗ್ರೆಸ್‌ನ ಉಪಾಧ್ಯಕ್ಷನಾಯಕ ಅಲಿ ಮೆಹ್ದಿ ಅವರು ಎಎಪಿ ಸೇರ್ಪಡೆಗೊಂಡ ಕೆಲವೇ ಗಂಟಗಳಲ್ಲಿ ಪುನಃ ಕಾಂಗ್ರೆಸ್‌ಗೆ ಮರಳಿದ್ದಾರೆ. ಬೆನ್ನಲ್ಲೇ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಅಲಿ ಮೆಹ್ದಿ, ಎಎಪಿಗೆ ಹೋಗುವ ಮೂಲಕ ದೊಡ್ಡ ತಪ್ಪು ಮಾಡಿದೆ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಇದಕ್ಕಾಗಿ ರಾಹುಲ್‌ ಗಾಂಧಿ ಅವರ ಬಳಿ ಕೈಜೋಡಿಸಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ. ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವರಿಗೆ ನಿಷ್ಠರಾಗಿರುವುದಾಗಿ ತಿಳಿಸಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಇಮ್ರಾನ್‌ ಪ್ರತಾಪ್‌ಗರ್ಹಿ, ಮಧ್ಯ ರಾತ್ರಿ 2 ಗಂಟೆಯ ಸಮಯವಾಗಿತ್ತು. ಮುಸ್ತಫಬಾದ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದ ಪಾಲಿಕೆ ಸದಸ್ಯರು ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಎಎಪಿಗೆ ಸೇರ್ಪಡೆಗೊಳಿಸಲು ಕುತಂತ್ರ ನಡೆಸಲಾಗಿತ್ತು. ಕೆಲವೇ ಗಂಟೆಗಳಲ್ಲಿ ತಮ್ಮ ತಪ್ಪಿನ ಅರಿವಾಗಿ ಕಾಂಗ್ರೆಸ್‌ಗೆ ವಾಪಸ್‌ ಆಗಿದ್ದಾರೆ ಎಂದರು.

ADVERTISEMENT

ಮೆಹ್ದಿ ಅವರ ಜೊತೆಗೆ ನೂತನ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಸಬಿಲಾ ಬೇಗಂ ಮತ್ತು ನಜಿಯಾ ಖಾಟೂನ್‌ ಅವರು ಶುಕ್ರವಾರ ಎಎಪಿ ಸೇರ್ಪಡೆಗೊಂಡಿದ್ದರು. ಮುಸ್ತಫಬಾದ್‌ನ ವಾರ್ಡ್‌ ಸಂಖ್ಯೆ 243ರಿಂದ ಸಬಿಲಾ ಮತ್ತು ಬ್ರಿಜ್‌ ಪುರಿಯ ವಾರ್ಡ್‌ ಸಂಖ್ಯೆ 245ರಿಂದ ನಜಿಯಾ ಗೆಲುವು ಸಾಧಿಸಿದ್ದರು.

ಇಬ್ಬರು ಕಾಂಗ್ರೆಸ್‌ ಸದಸ್ಯರು ಎಎಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ವಾರ್ಡ್‌ಗಳಲ್ಲಿ ಪ್ರತಿಭಟನೆಗಳು ನಡೆದವು. ಮೆಹ್ದಿ ವಿರುದ್ಧ ಘೋಷಣೆಗಳು ಕೇಳಿಬಂದವು. ಮೆಹ್ದಿ ಅವರ ಪ್ರತಿಕೃತಿಯನ್ನು ದಹನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.