ADVERTISEMENT

ಸರಕು ಸಾಗಣೆ ಹಡಗಿನಲ್ಲಿದ್ದ 14 ಸಿಬ್ಬಂದಿ ರಕ್ಷಣೆ

ಕರಾವಳಿ ರಕ್ಷಣಾ ಪಡೆಯಿಂದ ಸಾಹಸಮಯ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:38 IST
Last Updated 26 ಜುಲೈ 2024, 14:38 IST
<div class="paragraphs"><p>ಮಹಾರಾಷ್ಟ್ರದ ಅಲಿಬಾಗ್‌ ಸಮೀಪ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ&nbsp;‘ಜೆಎಸ್‌ಡಬ್ಲ್ಯು ರಾಯಗಡ’ ಎಂಬ ಸರಕು ಸಾಗಣೆ ಹಡಗಿನಲ್ಲಿದ್ದ 14 ಸಿಬ್ಬಂದಿಯನ್ನು ಭಾರತೀಯ ಕರಾವಳಿ ಕಾವಲುಪಡೆಯ ಯೋಧರು ಶುಕ್ರವಾರ ರಕ್ಷಿಸಿದ್ದಾರೆ </p></div>

ಮಹಾರಾಷ್ಟ್ರದ ಅಲಿಬಾಗ್‌ ಸಮೀಪ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ‘ಜೆಎಸ್‌ಡಬ್ಲ್ಯು ರಾಯಗಡ’ ಎಂಬ ಸರಕು ಸಾಗಣೆ ಹಡಗಿನಲ್ಲಿದ್ದ 14 ಸಿಬ್ಬಂದಿಯನ್ನು ಭಾರತೀಯ ಕರಾವಳಿ ಕಾವಲುಪಡೆಯ ಯೋಧರು ಶುಕ್ರವಾರ ರಕ್ಷಿಸಿದ್ದಾರೆ

   

–ಪಿಟಿಐ ಚಿತ್ರ

ಮುಂಬೈ: ಪ್ರತಿಕೂಲ ಹವಾಮಾನದಿಂದಾಗಿ ಮಹಾರಾಷ್ಟ್ರದ ಕರಾವಳಿಯಲ್ಲಿ ತೊಂದರೆಗೆ ಸಿಲುಕಿದ್ದ ಸರಕು ಸಾಗಣೆ ನೌಕೆಯೊಂದರ 14 ಸಿಬ್ಬಂದಿಯನ್ನು ಭಾರತೀಯ ಕರಾವಳಿ ಕಾಲುಪಡೆ (ಐಸಿಜಿ) ಯೋಧರು ಸಾಹಸಮಯ ಕಾರ್ಯಾಚರಣೆ ನಡೆಸಿ ಶುಕ್ರವಾರ ರಕ್ಷಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿಕೂಲ ಹವಾಮಾನ ಇದ್ದು, ಭಾರಿ ಮಳೆಯಾಗುತ್ತಿದೆ. ಜೆಎಸ್‌ಡಬ್ಲ್ಯು ಉದ್ಯಮ ಸಮೂಹಕ್ಕೆ ಸೇರಿದ ‘ಜೆಎಸ್‌ಡಬ್ಲ್ಯು ರಾಯಗಡ’ ಎಂಬ ನೌಕೆ, ಅಲಿಬಾಗ್‌ನಿಂದ ಒಂದು ನಾಟಿಕಲ್ ಮೈಲು ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿತ್ತು.

ಈ ಹಡಗು ತೊಂದರೆಗೆ ಸಿಲುಕಿದ್ದ ಕುರಿತು, ಗಸ್ತಿನಲ್ಲಿದ್ದ ಭಾರತೀಯ ಕರಾವಳಿ ಕಾವಲುಪಡೆಯ ‘ಐಸಿಜಿಎಸ್‌ ಸಂಕಲ್ಪ’ ನೌಕೆ ಹಾಗೂ ಮುಂಬೈನಲ್ಲಿರುವ ಕಡಲ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಸಂದೇಶ ರವಾನೆಯಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಐಸಿಜಿ ಯೋಧರು, ಸರಕು ಸಾಗಣೆ ಹಡಗಿನಲ್ಲಿದ್ದ ಎಲ್ಲ 14 ಸಿಬ್ಬಂದಿಯ ರಕ್ಷಿಸಿ, ಅವರನ್ನು ಹೆಲಿಕಾಪ್ಟರ್‌ ಮೂಲಕ ಅಲಿಬಾಗ್ ತೀರಕ್ಕೆ ಕರೆತಂದಿದ್ದಾರೆ.

‘ಮಹಾರಾಷ್ಟ್ರದ ಕರಾವಳಿಯಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿತ್ತಲ್ಲದೇ, ‘ಜೆಎಸ್‌ಡಬ್ಲ್ಯು ರಾಯಗಡ’ ಹಡಗಿನ ಎಂಜಿನ್‌ ಕೊಠಡಿಯಲ್ಲಿ ನೀರು ನುಗ್ಗುತ್ತಿದ್ದ ಕಾರಣ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಸಿಬ್ಬಂದಿಯನ್ನು ಏರ್‌ಲಿಫ್ಟ್‌ ಮಾಡುವುದು ನಮ್ಮ ಮುಂದಿದ್ದ ಏಕೈಕ ಆಯ್ಕೆಯಾಗಿತ್ತು’ ಎಂದು ಐಸಿಜಿ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.