ADVERTISEMENT

ಅನಪೇಕ್ಷಿತ ಹೇಳಿಕೆಗಳಿಂದ ಅನಗತ್ಯ ತಿಕ್ಕಾಟ: ಸುಪ್ರೀಂ ಕೋರ್ಟ್

ಸಂವಿಧಾನದ ಮೂರು ಅಂಗಗಳ ನಡುವೆ ಪರಸ್ಪರ ಗೌರವವಿರಲಿ: ಸುಪ್ರೀಂ ಕೋರ್ಟ್

ಪಿಟಿಐ
Published 20 ಸೆಪ್ಟೆಂಬರ್ 2024, 14:20 IST
Last Updated 20 ಸೆಪ್ಟೆಂಬರ್ 2024, 14:20 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ಅನಪೇಕ್ಷಿತ ಹೇಳಿಕೆ’ಗಳಿಂದ ಅನಗತ್ಯವಾದ ತಿಕ್ಕಾಟ ಉಂಟಾಗಲಿದೆ. ಆದ್ದರಿಂದ ಸಂವಿಧಾನದ ಮೂರೂ ಅಂಗಗಳು ತಮ್ಮ ಸಾಂವಿಧಾನಿಕ ಕಾರ್ಯನಿರ್ವಹಣೆಯಲ್ಲಿ ಪರಸ್ಪರ ಗೌರವ ತೋರಬೇಕೆಂದು ನಿರೀಕ್ಷಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.

ತೀರ್ಪುಗಳ ಬಗ್ಗೆ ನ್ಯಾಯಯುತ ಟೀಕೆಗೆ ಯಾವಾಗಲೂ ಸ್ವಾಗತವಿರಲಿದೆ. ಆದರೆ ನ್ಯಾಯಾಲಯಗಳ ತೀರ್ಪು, ಜಾರಿಗೊಳಿಸಿದ ಆದೇಶಗಳ ಬಗ್ಗೆ ಪ್ರತಿಕ್ರಿಯಿಸುವಾಗ ಸಾಕಷ್ಟು ಜಾಗರೂಕರಾಗಿರಬೇಕು. ‘ಮಿತಿಗಳನ್ನು ದಾಟದಿರಲಿ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು ತಿಳಿಸಿದೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್‌) ನಾಯಕಿ ಕೆ. ಕವಿತಾಗೆ ಜಾಮೀನು ಮಂಜೂರಾಗಿದ್ದಕ್ಕೆ, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ನೀಡಿದ ಹೇಳಿಕೆಯು ನ್ಯಾಯಾಲಯದ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರೆಡ್ಡಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನೂ ಪರಿಗಣಿಸಿದ ನ್ಯಾಯಪೀಠವು, ಈ ವಿಷಯದಲ್ಲಿ ಮತ್ತಷ್ಟು ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿದೆ. 

ADVERTISEMENT

‘ನಾವು ಈ ವಿಷಯದಲ್ಲಿ ಮತ್ತಷ್ಟು ಮುಂದುವರಿಯಲು ಬಯಸದಿದ್ದರೂ, ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಲು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ಎಚ್ಚರಿಸಬಹುದು’ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.