ಉತ್ತರಕಾಶಿ: ‘ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ 40 ಕಾರ್ಮಿಕರನ್ನು ತ್ವರಿತವಾಗಿ ಹೊರಗೆ ಕರೆತರುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ರಕ್ಷಣಾ ಕಾರ್ಯಾಚರಣೆಗೆ ಇನ್ನೂ ಎರಡು ಅಥವಾ ಮೂರು ದಿನ ಅಗತ್ಯವಿದೆ’ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ತಿಳಿಸಿದ್ದಾರೆ.
ಸುರಂಗ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾರ್ಮಿಕರು ಸುರಕ್ಷಿತವಾಗಿರಬೇಕು ಮತ್ತು ಅವರನ್ನು ಆದಷ್ಟು ಬೇಗ ಹೊರಗೆ ಕರೆತರಬೇಕು ಎಂಬುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ಹೇಳಿದರು.
’ಸುರಂಗದಲ್ಲಿರುವ ಕಾರ್ಮಿಕರ ಜತೆಗೆ ಮಾತನಾಡಿದ್ದು, ಅವರು ಸುರಕ್ಷಿತವಾಗಿದ್ದಾರೆ. ಅಲ್ಲದೆ, ಅವರಿಗೆ ಹೆಚ್ಚು ಧೈರ್ಯವಿದೆ. ಅವರಿಗೆ ನಿರಂತರವಾಗಿ ಆಮ್ಲಜನಕ, ವಿದ್ಯುತ್, ಆಹಾರ ಮತ್ತು ನೀರನ್ನು ಪೂರೈಸಲಾಗುತ್ತಿದೆ‘ ಎಂದು ಹೇಳಿದರು.
ಸುರಂಗ ಕುಸಿತದ ಕುರಿತು ಉನ್ನತ ಮಟ್ಟದ ತನಿಖೆ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ, ’ಮೊದಲು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲಿ. ನಂತರ, ಈ ವಿಷಯದ ಬಗ್ಗೆ ನಿರ್ಧರಿಸಲಾಗುತ್ತದೆ‘ ಎಂದು ಪ್ರತಿಕ್ರಿಯಿಸಿದರು.
ಕಾರ್ಮಿಕರ ರಕ್ಷಣೆಗೆ ಅಮೆರಿಕದ ಯಂತ್ರ: ಸುರಂಗದಲ್ಲಿ ಕಳೆದ ಐದು ದಿನಗಳಿಂದ ಸಿಲುಕಿದ 40 ಕಾರ್ಮಿಕರ ರಕ್ಷಣೆಗಾಗಿ ವಾಯುಪಡೆ ಮೂಲಕ ದೆಹಲಿಯಿಂದ ರಂಧ್ರ ಕೊರೆಯುವ ವಿಶೇಷ ಯಂತ್ರವನ್ನು ಗುರುವಾರ ತರಲಾಗಿದೆ.
ಈ ಯಂತ್ರದ ಮೂಲಕ ಸುರಂಗದಲ್ಲಿ ರಂಧ್ರ ಕೊರೆಯುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.
ಸಣ್ಣ ಯಂತ್ರದ ಮೂಲಕ ಅವಶೇಷಗಳಡಿ ಸ್ಟೀಲ್ ಪೈಪ್‌ಗಳನ್ನು ಬಿಟ್ಟು ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದರಿಂದ ಭಾರತೀಯ ವಾಯುಪಡೆಯು ಗುರುವಾರ ಸಿ–130 ಹರ್ಕ್ಯುಲಸ್ ಸಾಗಣೆ ವಿಮಾನಗಳ ಮೂಲಕ ಹೊಸ ಯಂತ್ರವನ್ನು ದೆಹಲಿಯಿಂದ ಉತ್ತರಕಾಶಿಗೆ ಸಾಗಿಸಿತ್ತು. ಈ ಯಂತ್ರ ಅಮೆರಿಕದಲ್ಲಿ ತಯಾರಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ‘ದೆಹಲಿಯಿಂದ ತರಿಸಿಕೊಳ್ಳಲಾದ ಹೊಸ ಯಂತ್ರದ ಮೂಲಕ ಈಗ ಕುಸಿತವಾಗಿರುವ ಸ್ಥಳದ ಮೂಲಕ 5–7 ಮೀಟರ್‌ವರೆಗೆ ಕೊರೆಯಲಾಗಿದೆ. ಪ್ರತಿ ಗಂಟೆಗೆ 5–10 ಮೀಟರ್‌ನಷ್ಟು ಕೊರೆಯುತ್ತಿರುವ ಈ ಯಂತ್ರವು ಶೀಘ್ರವೇ ಒಳಗೆ ಸಿಲುಕಿದ ಕಾರ್ಮಿಕರು ಇರುವ ಸ್ಥಳಕ್ಕೆ ತಲುಪಲಿದೆ ಎಂಬ ಭರವಸೆಯಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.