ADVERTISEMENT

ಉತ್ತರ ಪ್ರದೇಶ: ಕುರ್ಚಿ ಸಮೇತ ಮಹಿಳಾ ಪ್ರಾಂಶುಪಾಲರು ಹೊರಕ್ಕೆ

ಪಿಟಿಐ
Published 6 ಜುಲೈ 2024, 15:59 IST
Last Updated 6 ಜುಲೈ 2024, 15:59 IST
.
.   

ಲಖನೌ: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಕಾಲೇಜೊಂದರ ಮಹಿಳಾ ಪ್ರಾಂಶುಪಾಲರನ್ನು ಕುರ್ಚಿ ಸಮೇತ ಹೊರಹಾಕಿದ ಘಟನೆ ನಡೆದಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. 

ಬಿಷಪ್‌ ಜಾನ್ಸನ್‌ ಇಂಟರ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಘಟನೆ ವಿವರ:

ADVERTISEMENT

ವಿಡಿಯೊ ಪ್ರಕಾರ, ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಪ್ರಾಂಶುಪಾಲರಾದ ಪಾರುಲ್‌ ಸೊಲೊಮನ್‌ ಅವರ ಬಳಿ ಧಾವಿಸಿ ಬರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮತ್ತು ಇತರರು ಕುರ್ಚಿ ತೆರವುಗೊಳಿಸುವಂತೆ ಸೂಚಿಸುತ್ತಾರೆ. ಆದರೆ, ಪ್ರಾಂಶುಪಾಲರು ಕುರ್ಚಿಯಿಂದ ಮೇಲೇಳದಿದ್ದಾಗ, ಅವರ ಮೊಬೈಲ್‌ ಅನ್ನು ಬಲವಂತವಾಗಿ ಕಸಿದುಕೊಳ್ಳಲಾಗುತ್ತದೆ. ‘ನನ್ನನ್ನು ಮುಟ್ಟಬೇಡಿ‘ ಎಂದು ಪ್ರಾಂಶುಪಾಲರು ಸೂಚಿಸುತ್ತಿದ್ದರೂ ಅವರ ಕುರ್ಚಿಯನ್ನು ಎಳೆದಾಡಲಾಗಿದೆ.

ಆಷ್ಟಾದರೂ ಕುರ್ಚಿಯಿಂದ ಪ್ರಾಂಶುಪಾಲರು ಏಳದಿದ್ದಾಗ, ಸಿಟ್ಟಿಗೆದ್ದ ಅಧ್ಯಕ್ಷರು ಇತರ ಸಿಬ್ಬಂದಿ ಜತೆಗೂಡಿ ಪ್ರಾಂಶುಪಾಲರು ಕುಳಿತಿದ್ದ ಕುರ್ಚಿ ಸಮೇತ ಅವರನ್ನು ಕಚೇರಿಯಿಂದ ಹೊರಗೆ ಎಳೆದುಕೊಂಡು ಹೋಗುತ್ತಾರೆ. ಆಗ ಬೀಳುವಂತಾದಾಗ, ಸೊಲೊಮನ್‌ ಅವರು ಕುರ್ಚಿಯಿಂದ ಏಳುತ್ತಾರೆ. ಆ ಕೂಡಲೇ ಕುರ್ಚಿಯನ್ನು ಎಳೆದುಕೊಳ್ಳುವ ಅಧ್ಯಕ್ಷರು, ಅದರಲ್ಲಿ ಮತ್ತೊಬ್ಬ ಮಹಿಳೆಯನ್ನು ಕೂರಿಸಿ, ಪರಿಚಯಿಸುತ್ತಾರೆ. ಆಗ ಕಚೇರಿಯಲ್ಲಿದ್ದ ಕೆಲವರು ಚಪ್ಪಾಳೆ ತಟ್ಟಿ ಅಭಿನಂದಿಸುತ್ತಾರೆ.

ದೂರು ದಾಖಲು:

ಈ ಘಟನೆಯ ಬಳಿಕ ಸೊಲೊಮನ್‌ ಅವರು ಪೊಲೀಸರಿಗೆ ದೂರು ನೀಡಿದ್ದು, ‘ನನ್ನ ಮೇಲೆ ಹಲ್ಲೆ ಮಾಡಿ, ಬಲವಂತವಾಗಿ ಕಚೇರಿಯಿಂದ ಹೊರಹಾಕಲಾಗಿದೆ’ ಎಂದು ಆರೋಪಿಸಿದ್ದಾರೆ.

ಕಾಲೇಜು ನಿರ್ವಹಣೆಯಲ್ಲಿ ವಿವಾದವಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಸೊಲೊಮನ್‌ ಹೇಳಿಕೊಂಡಿದ್ದಾರೆ. ಆದರೆ, ಅವರ ಪ್ರತಿಸ್ಪರ್ಧಿ ಬಣದವರು, ಪ್ರಾಂಶುಪಾಲರು ಕಾಲೇಜಿನ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶ ಲೋಕಸೇವಾ ಆಯೋಗ ನಡೆಸಿದ್ದ ಆರ್‌ಒ–ಎಆರ್‌ಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣದಲ್ಲಿ ಈ ಕಾಲೇಜಿನ ಹೆಸರು ಕೇಳಿ ಬಂದಿತ್ತು ಎಂದು ಲಖನೌ ಡಯಾಸಿಸ್‌ ಅನ್ನು ಪ್ರತಿನಿಧಿಸುವ ಬಿಷಪ್‌ ಎಡ್ಗರ್‌ ಡಾನ್‌ ಹೇಳಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.