ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ| ಕುಟುಂಬ ರಾಜಕಾರಣ: ಎಲ್ಲ ಪಕ್ಷಗಳಿಂದಲೂ ಮಣೆ

ಪಿಟಿಐ
Published 24 ಅಕ್ಟೋಬರ್ 2024, 15:35 IST
Last Updated 24 ಅಕ್ಟೋಬರ್ 2024, 15:35 IST
-
-   

ಮುಂಬೈ(ಪಿಟಿಐ): ಎಲ್ಲ ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ತಮ್ಮ ವಿರೋಧಿಗಳನ್ನು ಟೀಕಿಸುತ್ತವೆ. ಆದರೆ, ಟಿಕೆಟ್‌ ಹಂಚಿಕೆ ವಿಷಯ ಬಂದಾಗ ಮಾತ್ರ ಎಲ್ಲ ಪಕ್ಷಗಳು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತವೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಟಿಕೆಟ್‌ ಹಂಚಿಕೆ ಮಾಡಿರುವುದನ್ನು ಗಮನಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.

ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ.

ADVERTISEMENT

ಆಡಳಿತಾರೂಢ ಪಕ್ಷಗಳ ಪೈಕಿ, ಬಿಜೆಪಿ, ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ, ಅಜಿತ್ ಪವಾರ್‌ ನೇತೃತ್ವದ ಎನ್‌ಸಿಪಿ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿವೆ. ಇನ್ನು, ವಿಪಕ್ಷ ಪಾಳಯ ‘ಮಹಾ ವಿಕಾಸ್‌ ಅಘಾಡಿ‘ (ಎಂವಿಎ)ಯ ಶಿವಸೇನಾ (ಯುಬಿಟಿ) ಮೊದಲ ಪಟ್ಟಿ ಪ್ರಕಟಿಸಿದೆ.

ಈ ಎಲ್ಲ ಪಕ್ಷಗಳ ಮೊದಲ ಪಟ್ಟಿಯನ್ನು ಗಮನಿಸಿದಾಗ, ಬಹುತೇಕ ಅಭ್ಯರ್ಥಿಗಳು ಹಾಲಿ ಸಚಿವರು, ಶಾಸಕರು ಇಲ್ಲವೇ ಸಂಸದರ ಪತ್ನಿ, ಪುತ್ರರು ಅಥವಾ ಪುತ್ರಿಯರು ಇಲ್ಲವೇ ಹತ್ತಿರದ ಸಂಬಂಧಿಗಳು ಅಥವಾ ಸಹೋದರ/ಸಹೋದರಿಯರು ಇರುವುದು ಕಂಡುಬರುತ್ತದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಅಶೋಕ್‌ ಚವಾಣ್‌ ಪುತ್ರಿ ಶ್ರೀಜಯಾ ಚವಾಣ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶಿಶ್‌ ಶೇಲಾರ್‌ ಸಹೋದರ ವಿನೋದ್‌ ಶೇಲಾರ್, ಹಾಲಿ ಶಾಸಕ ಗಣಪತ್‌ ಗಾಯಕ್ವಾಡ್‌ ಬದಲಾಗಿ ಅವರ ಪತ್ನಿ ಸುಲಭಾ ಅವರನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿ ಸಂಸದ ನಾರಾಯಣ ರಾಣೆ ಅವರ ಮತ್ತೊಬ್ಬ ಪುತ್ರ ನಿಲೇಶ್‌ ಶಿವಸೇನಾ (ಶಿಂದೆ ಬಣ) ಸೇರಿದ್ದು, ಅವರಿಗೆ ಕಂಕಾವಳಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ರಾಣೆ ಅವರ ಇನ್ನೊಬ್ಬ ಪುತ್ರ ನಿತೇಶ್‌ ಹಾಲಿ ಶಾಸಕ.

ಪುಣೆಯ ಚಿಂಚವಾಡ ಕ್ಷೇತ್ರದ ಹಾಲಿ ಶಾಸಕಿ ಅಶ್ವಿನಿ ಜಗತಾಪ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿಲ್ಲ. ಅಶ್ವಿನಿ ಅವರ ಪತಿ, ಪಕ್ಷದ ನಾಯಕ ದಿವಂಗತ ಲಕ್ಷ್ಮಣ ಜಗತಾಪ್‌ ಅವರ ಸಹೋದರ ಶಂಕರ್‌ ಜಗತಾಪ್‌ ಅವರಿಗೆ ಬಿಜೆಪಿ ಮಣೆ ಹಾಕಿದೆ. ಇದು ಅವರ ಮೊದಲ ಚುನಾವಣೆ.

ಎನ್‌ಸಿಪಿ (ಅಜಿತ್‌ ಪವಾರ್‌) ಹಿರಿಯ ನಾಯಕ ಛಗನ್‌ ಭುಜಬಲ್‌ ಅವರ ಸೋದರ ಸಂಬಂಧಿ ಸಮೀರ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ಕ್ಷೇತ್ರದಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೆ, ಅವರ ಸಂಬಂಧಿ ವರುಣ್‌ ಸರ್ದೇಸಾಯಿ ಬಾಂದ್ರಾ (ಪೂರ್ವ)ದಿಂದ ಸ್ಪರ್ಧಿಸುತ್ತಿದ್ದಾರೆ.

ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಸಹೋದರ ಹಾಗೂ ಹಾಲಿ ಶಾಸಕ ಸುನಿಲ್‌ ರಾವುತ್‌ ಅವರಿಗೆ ಶಿವಸೇನಾ (ಯುಬಿಟಿ)ಮತ್ತೊಮ್ಮೆ ಮಣೆ ಹಾಕಿದೆ.

ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಕೂಡ ತನ್ನ ಅನೇಕ ನಾಯಕರ ಸಂಬಂಧಿಕರಿಗೆ ಟಿಕೆಟ್‌ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.