ADVERTISEMENT

ವಕ್ಫ್‌ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವ; ಎಐಎಸ್‌ಎಸ್‌ಸಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 23:56 IST
Last Updated 6 ಆಗಸ್ಟ್ 2024, 23:56 IST
   

ನವದೆಹಲಿ: ವಕ್ಫ್‌ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಖಿಲ ಭಾರತ ಸೂಫಿ ಸಜ್ಜಾದನಶಿನ್ ಕೌನ್ಸಿಲ್‌ (ಎಐಎಸ್‌ಎಸ್‌ಸಿ) ಮಂಗಳವಾರ ಸ್ವಾಗತಿಸಿದ್ದು, ಇದು ದೀರ್ಘ ಕಾಲದಿಂದ ಬಾಕಿ ಉಳಿದಿದೆ ಎಂದು ಹೇಳಿದೆ.

ವಕ್ಫ್‌ ಮಂಡಳಿಯ ಕಾರ್ಯದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರಲು ಹಾಗೂ ಮಂಡಳಿಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಕಡ್ಡಾಯ ಮಾಡಲು ಕೇಂದ್ರ ಸರ್ಕಾರವು 1995ರ ಕಾಯ್ದೆಗೆ ತಿದ್ದುಪಡಿ ತರಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ಅಖಿಲ ಭಾರತ ಸೂಫಿ ಸಜ್ಜಾದನಶಿನ್ ಕೌನ್ಸಿಲ್‌ ಅಧ್ಯಕ್ಷ ಹಜ್ರೊತ್‌ ಸೈಯದ್‌ ನಸೆರುದ್ದೀನ್‌ ಚಿಸ್ತಿ ಅವರು ತಿದ್ದುಪಡಿಗಳಡಿ ಪ್ರತ್ಯೇಕ ದರ್ಗಾ ಮಂಡಳಿ ರಚಿಸುವಂತೆ ಆಗ್ರಹಿಸಿದರು.

ADVERTISEMENT

‘ಪ್ರಸ್ತುತ ವಕ್ಫ್‌ ಕಾಯ್ದೆಯಲ್ಲಿ ದರ್ಗಾಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ನಮ್ಮ ಅನೇಕ ಸಂಪ್ರದಾಯಗಳು ಷರಿಯಾದಲ್ಲಿ ಇಲ್ಲದಿರುವುದರಿಂದ ವಕ್ಫ್‌ ಮಂಡಳಿಗಳು ದರ್ಗಾದ ಸಂಪ್ರದಾಯಗಳನ್ನು ಗುರುತಿಸುವುದಿಲ್ಲ. ಆದ್ದರಿಂದ ನಾವು ಪ್ರತ್ಯೇಕ ದರ್ಗಾ ಮಂಡಳಿಗಾಗಿ ಒತ್ತಾಯಿಸುತ್ತೇವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಎಐಎಸ್‌ಎಸ್‌ಸಿಯ ಪ್ರತಿನಿಧಿಗಳು ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಢೊಬಾಲ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರನ್ನು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.