ಮುಂಬೈ: ‘ಮಹಾರಾಷ್ಟ್ರ ಮಹಾವಿಕಾಸ ಅಘಾಡಿಸರ್ಕಾರದಲ್ಲಿ ಯಾರಿಗೂ ಅತೃಪ್ತಿ ಇಲ್ಲ. ಎಲ್ಲ ಸಚಿವರೊಂದಿಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಉತ್ತಮ ಬಾಂಧವ್ಯವಿದೆ,’ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಅಸಮಾಧಾನದ ಮಾತು, ಅದರ ವಿರುದ್ಧ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾಗಿರುವ ಸಂಪಾದಕೀಯ ಇದೆಲ್ಲದರ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾವುತ್, ‘ಸಚಿವ ಸಂಪುಟದ ಎಲ್ಲರೊಂದಿಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಉತ್ತಮ ಸಂಬಂಧವಿದೆ. ಸರ್ಕಾರದಲ್ಲಿ ಯಾರಿಗೂ ಅತೃಪ್ತಿ ಇಲ್ಲ. ಕಾಂಗ್ರೆಸ್ ನಾಯಕರಾದ ಬಾಳಾ ಸಾಹೇಬ್ ಥೋರಟ್ ಮತ್ತು ಅಶೋಕ್ ಚವಾಣ್ ಅವರೊಂದಿಗೆ ಚರ್ಚೆ ನಡೆದಿದೆ. ಕೊರೊನಾ ವೈರಸ್‌ನಿಂದಾಗಿ ರಾಜ್ಯದಲ್ಲಿ ಎದುರಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಎಲ್ಲರ ಮನವಿಗಳನ್ನು ಆಲಿಸುತ್ತಿದ್ದಾರೆ,’ ಎಂದಿದ್ದಾರೆ.
‘ಸರ್ಕಾರದಲ್ಲಿ ಯಾರೂ ಕೋಪಗೊಂಡಿಲ್ಲ. ಕ್ಯಾಬಿನೆಟ್ ಸಭೆಯಲ್ಲಿ ಎಲ್ಲಾ ಮಂತ್ರಿಗಳು ಹಾಜರಿರುತ್ತಾರೆ. ಬಾಳಾ ಸಾಹೇಬ್ ಥೋರಟ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಹೌದು, ಅಶೋಕ್ ಚವಾಣ್ ಅವರು ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಯೂ ಆಗಿದ್ದಾರೆ. ಸಂಪುಟದಲ್ಲಿ ಅವರೊಂದಿಗೂ ಮಾತುಕತೆ ನಡೆಯುತ್ತದೆ. ಮುಖ್ಯಮಂತ್ರಿ ಕ್ಯಾಬಿನೆಟ್‌ನಲ್ಲಿರುವ ಎಲ್ಲ ಮಂತ್ರಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ,’ ಎಂದು ರಾವುತ್ ಹೇಳಿದ್ದಾರೆ.
‘ಬಾಳಾ ಸಾಹೇಬ್ ಥೋರಟ್ ಮತ್ತು ಅಶೋಕ್ ಚವಾಣ್ ಮುಖ್ಯಮಂತ್ರಿಯನ್ನು ಭೇಟಿಯಾದ ನಂತರ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ. ಇಂತಹ ಸಮಸ್ಯೆಗಳು ಕೆಲವೊಮ್ಮೆ ಉದ್ಭವಿಸುತ್ತವೆ. ಕೆಲವು ಕಾಂಗ್ರೆಸ್ ಮಂತ್ರಿಗಳು, ವಿಶೇಷವಾಗಿ ಅಶೋಕ್ ಚವಾಣ್ ಅವರು, ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿಗೆ ತಿಳಿಸಿದ್ದಾರೆ,’ ಎಂದು ರಾವುತ್ ಹೇಳಿದರು.
ರಾವುತ್ ಸ್ಪಷ್ಟನೆಗೆ ಕಾರಣವೇನು?
‘ಸರ್ಕಾರದಲ್ಲಿ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಸರ್ಕಾರದ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಅಸಮಾಧಾನವಿದೆ. ಈ ವಿಷಯವನ್ನು ಶೀಘ್ರದಲ್ಲೇ ಮುಖ್ಯಮಂತ್ರಿ ಗಮನಕ್ಕೆ ತರುತ್ತೇವೆ,’ ಎಂಬ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಮಂಗಳವಾರ ಸಂಪಾದಕೀಯ ಪ್ರಕಟವಾಗಿದೆ. ಅದರಲ್ಲಿ, ‘ಕಾಂಗ್ರೆಸ್ ಒಳ್ಳೆಯ ಕೆಲಸಗಳನ್ನೇ ಮಾಡುತ್ತದೆ. ಆದರೆ, ಅದು ಆಗಾಗ ಗದ್ದಲ ಸೃಷ್ಟಿಸುತ್ತದೆ. ಅದಕ್ಕೆ ಏನು ಬೇಕು? ಯಾಕೆ ಹೀಗೆ ಗದ್ದಲ ಮಾಡುತ್ತದೆ,’ ಎಂದು ಬರೆಯಲಾಗಿದೆ.
ಸಂಪಾದಕೀಯದಲ್ಲಿ ಕಾಂಗ್ರೆಸ್ ಅನ್ನು ಟೀಕಿಸಿರುವ ಪ್ರಶ್ನೆಗೆ ಉತ್ತರಿಸಿರುವರಾವುತ್, ‘ಸಂಪಾದಕೀಯದಲ್ಲಿ ಕಾಂಗ್ರೆಸ್ ಬಗ್ಗೆ ಯಾವುದೇ ಟೀಕೆಗಳಿಲ್ಲ. ಇದು ಸಾಮ್ನಾದ ಬರವಣಿಗೆಯ ಶೈಲಿಯಷ್ಟೇ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.